ಜೈಲು ಅಕ್ರಮ ವರದಿ ಶೀಘ್ರ ಬಹಿರಂಗ

ಬೆಂಗಳೂರು: ಪರಪ್ಪನ ಅಗ್ರಹಾರ ಕರ್ಮಕಾಂಡವನ್ನು ಬಯಲಿಗೆಳೆದ ಐಪಿಎಸ್ ಹಿರಿಯ ಅಧಿಕಾರಿ ಡಿ.ರೂಪಾ ಅವರ ಹೋರಾಟಕ್ಕೆ ಕೊನೆಗೂ ಜಯ ದೊರೆತಂತಾಗಿದೆ. ಜೈಲಿನ ಅಕ್ರಮಗಳ ಕುರಿತು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಕೊಟ್ಟಿರುವ ವರದಿಯನ್ನು ಬಹಿರಂಗಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಹಕ್ಕು ಆಯೋಗ ಆದೇಶಿಸಿದೆ.

ವಿನಯ್ ಕುಮಾರ್ ವರದಿ ನೀಡುವಂತೆ ಈ ಹಿಂದೆ ರಾಜ್ಯ ಗೃಹ ಇಲಾಖೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಂಡಳಿ ಕೂಡ ಸೂಚಿಸಿತ್ತು. ಇದರ ಬೆನ್ನಲ್ಲೇ ಈಗ ರಾಜ್ಯ ಮಾಹಿತಿ ಹಕ್ಕು ಆಯೋಗ, 30 ದಿನದಲ್ಲಿ ತನಿಖಾ ವರದಿಯ ಒಂದು ಪ್ರತಿಯನ್ನು ರೂಪಾ ಅವರಿಗೆ ನೀಡುವಂತೆ ಸೂಚಿಸಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಡಿಐಜಿಯಾಗಿದ್ದ ಸಂದರ್ಭ ಅಲ್ಲಿನ ಅವ್ಯವಹಾರಗಳನ್ನು ರೂಪಾ ಸರ್ಕಾರದ ಗಮನಕ್ಕೆ ತಂದಿದ್ದರು. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡಿನ ಶಶಿಕಲಾರಿಂದ -ಠಿ;2 ಕೋಟಿ ಪಡೆದು ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು.

ಕಾರಾಗೃಹಗಳ ಡಿಜಿಪಿ ಆಗಿದ್ದ ಸತ್ಯನಾರಾಯಣ ರಾವ್ ವಿರುದ್ಧ ನೇರ ಆರೋಪ ಮಾಡಿದ್ದರಿಂದ ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ವಿನಯ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರ ಸೂಚಿಸಿತ್ತು. ಅದರಂತೆ ತಂಡ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಇದಾದ ಕೆಲ ತಿಂಗಳ ಬಳಿಕ ವರದಿ ನೀಡುವಂತೆ ರೂಪಾ ಆರ್​ಟಿಐ ಮೂಲಕ ಕೇಳಿದ್ದರು. ಈ ಸಂಬಂಧ ಸಾಕಷ್ಟು ಹೋರಾಟವನ್ನೂ ನಡೆಸಿದ್ದರು. ಆದರೆ, ತನಿಖಾ ವರದಿ ಅವರಿಗೆ ದೊರೆತಿರಲಿಲ್ಲ. ಇದೀಗ ರೂಪಾಗೆ ಜಯ ಸಿಕ್ಕಂತಾಗಿದೆ.

ತನಿಖಾ ವರದಿಯನ್ನು ಮುಂದಿನ 30 ದಿನದೊಳಗಾಗಿ ನನಗೆ ನೀಡುವಂತೆ ಮಾಹಿತಿ ಹಕ್ಕು ಆಯೋಗ ಸರ್ಕಾರಕ್ಕೆ ಸೂಚಿಸಿದೆ. ಇಷ್ಟು ದಿನ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

| ಡಿ.ರೂಪಾ ಐಪಿಎಸ್ ಹಿರಿಯ ಅಧಿಕಾರಿ