ಸಂಸದ ಡಿಕೆ ಸುರೇಶ್​ಗೆ ಸ್ತ್ರೀ ಕಂಟಕ?

| ಗಂಗಾಧರ್ ಬೈರಾಪಟ್ಟಣ ರಾಮನಗರ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಸ್ತ್ರೀ ಕಂಟಕ ಕಾಡುತ್ತಿದೆಯೇ? ‘ಹೌದು’ ಎನ್ನುತ್ತಿವೆ ಬಿಜೆಪಿ ಮೂಲಗಳು.

ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಸ್ಪರ್ಧೆಯ ಹಿಂದೆ ಜ್ಯೋತಿಷಿ ಯೊಬ್ಬರ ಭವಿಷ್ಯವಾಣಿ ಪ್ರಭಾವವಿದೆ ಎಂದು ತಿಳಿದುಬಂದಿದೆ. ಡಿಕೆಸು ಕಾಂಗ್ರೆಸ್ ಪಾಲಿಗೆ ಗೆಲ್ಲುವ ಅಭ್ಯರ್ಥಿ ಗಳಲ್ಲೊಬ್ಬರು. ಹೀಗಾಗಿ ಬೆಂಗಳೂರು ಗ್ರಾಮಾಂತರ ಮೈತ್ರಿಕೂಟದ ಹಾಟ್ ಫೇವರೀಟ್ ಕ್ಷೇತ್ರ. ಆದರೆ, ಅಭ್ಯರ್ಥಿ ಡಿ.ಕೆ.ಸುರೇಶ್​ಗೆ ಮಹಿಳೆಯಿಂದ ಕಂಟಕವಿದೆ ಎಂದು ಜ್ಯೋತಿಷಿ ನುಡಿದಿದ್ದಾರಂತೆ. ಅಲ್ಲದೆ ಡಿ.ಕೆ.ಶಿವಕುಮಾರ್ ಹಾಗೂ ಸಿ.ಪಿ.ಯೋಗೇಶ್ವರ್​ಗೆ ಆಪ್ತರಾಗಿರುವ ಜ್ಯೋತಿಷಿಯೊಬ್ಬರು ಹೇಳಿರುವಂತೆ ನಿಶಾ ಭವಿಷ್ಯ ಚೆನ್ನಾಗಿದೆ. ಅಷ್ಟಕ್ಕೂ ಆ ಜ್ಯೋತಿಷಿ ಯಾರು ಎನ್ನುವ ಗುಟ್ಟನ್ನು ಮಾತ್ರ ಬಿಜೆಪಿ ನಾಯಕರು ಬಿಟ್ಟುಕೊಟ್ಟಿಲ್ಲ.

ಗೆಲುವು ಸುಲಭವಿಲ್ಲ

ಕ್ಷೇತ್ರದಲ್ಲಿ ಯೋಗೇಶ್ವರ್ ಹೆಸರು ಮುಂಚೂಣಿ ಯಲ್ಲಿತ್ತು. ಇದು ಬಿಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿತ್ತು. ನಿಶಾ ಹೆಸರು ಕೇಳುತ್ತಿದ್ದಂತೆ ಕೊಂಚ ಹಿನ್ನಡೆಯಾಗಿದೆ.

ಸ್ತ್ರೀ ದಾಳ ಹಾಕಿದ್ದ ಡಿಕೆಶಿ

2002ರ ಕನಕಪುರ ಲೋಕಸಭೆ ಉಪಸಮರದಲ್ಲಿ ಎಚ್.ಡಿ.ದೇವೇಗೌಡರ ವಿರುದ್ಧ ಸೋಲು ಕಂಡಿದ್ದ ಡಿ.ಕೆ.ಶಿವಕುಮಾರ್, 2004ರ ಮಹಾಸಮರದಲ್ಲಿ ಗೌಡರ ವಿರುದ್ಧ ಬಳಕೆ ಮಾಡಿದ್ದು ಇದೇ ಸ್ತ್ರೀ ಅಸ್ತ್ರವನ್ನು. ಕಿರುತೆರೆ ನಿರೂಪಕಿಯಾಗಿ ರಾಜ್ಯದ ಜನತೆಗೆ ಪರಿಚಯವಿದ್ದ ತೇಜಸ್ವಿನಿ ಅವರನ್ನು ರಾಜಕಾರಣಕ್ಕೆ ಕರೆತಂದು ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದರು. ವಿರ್ಪ ಯಾಸವೆಂದರೆ, ಅಂದು ಸಹ ದೇವೇಗೌಡರಿಗೆ ಸ್ತ್ರೀಯಿಂದ ಸೋಲಿದೆ ಎಂದು ಜ್ಯೋತಿಷಿಗಳು ನುಡಿದಿದ್ದರಂತೆ. ತೇಜಸ್ವಿನಿ ಸ್ಪರ್ಧಿಸುತ್ತಿದ್ದಂತೆ, ಗೌಡರು ಹಾಸನದಿಂದಲೂ ಸ್ಪರ್ಧಿಸಿದ್ದರು. ಅಲ್ಲಿ ಗೆದ್ದರು. ಇಲ್ಲಿ ತೇಜಸ್ವಿನಿ ವಿರುದ್ಧ ಸೋತರು.

ನಿಶಾ ಏಕೆ?

ಪ್ರತಿ ಚುನಾವಣೆಯಲ್ಲೂ ತಂದೆ ಯೋಗೇಶ್ವರ್ ಪರ ಪ್ರಚಾರಕ್ಕಿಳಿದು ರಾಜಕೀಯದ ಒಳ ಹೊರಗನ್ನು ಅರಿತುಕೊಂಡಿರುವ ನಿಶಾ ಎಂದೂ ನೇರ ರಾಜಕಾರಣದಲ್ಲಿ ಕಾಣಿಸಿಕೊಂಡಿಲ್ಲ. 2013ರ ಚುನಾವಣೆ ವೇಳೆ, ಜೆಡಿಎಸ್ ಸ್ಪರ್ಧಿ ಅನಿತಾ ಕುಮಾರಸ್ವಾಮಿ ಅವರಿಗೆ ಸಾರ್ವಜನಿಕವಾಗಿ ಶುಭ ಕೋರಿ ರಾಜಕೀಯ ಚಾಣಾಕ್ಷತನದಿಂದ ಗಮನ ಸೆಳೆದಿದ್ದರು. ಮಗಳನ್ನು ಹೇಗಾದರೂ ಮಾಡಿ ಲೋಕಸಭೆ ಅಖಾಡಾದಲ್ಲಿ ಗೆಲ್ಲಿಸಿಕೊಂಡು, ತಮ್ಮ ರಾಜಕಾರಣವನ್ನು ಚನ್ನಪಟ್ಟಣದಲ್ಲಿ ಮುಂದುವರಿಸುವ ಇರಾದೆ ಯೋಗೇಶ್ವರ್ ಅವರದು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.