ಗದಗ: ಕನಕಪುರ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣದ ವಿಚಾರವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ಗೆ ಹೇಗಾದರೂ ಮಾಡಿ ಪ್ರತಿಪಕ್ಷದ ನಾಯಕರಾಗಬೇಕು ಅಥವಾ ಕೆಪಿಸಿಸಿ ಅಧ್ಯಕ್ಷ ಆಗಬೇಕು ಎಂಬುದು ಉದ್ದೇಶ. ಹಾಗಾಗಿ ತಮ್ಮ ನಿಷ್ಠೆಯನ್ನು ಅವರು ಸೋನಿಯಾ ಗಾಂಧಿಗೆ ತೋರಿಸಬೇಕಾಗಿದೆ. ನಿಷ್ಠೆ ಏಸು ಕ್ರಿಸ್ತನಿಗೆ ಅಲ್ಲ, ಸೋನಿಯಾ ಗಾಂಧಿಗೆ. ಏನು ಮಾಡಿದರೆ ಸೋನಿಯಾ ಗಾಂಧಿಯವರಿಗೆ ಇಷ್ಟ ಎಂಬುದು ಡಿ.ಕೆ.ಶಿವಕುಮಾರ್ಗೆ ಗೊತ್ತು ಎಂದು ಹೇಳಿದರು.
ಸರಿಯಾಗಿ ಅನುಮತಿ ಪಡೆಯದೆ ಸರ್ಕಾರಿ ಜಾಗದಲ್ಲಿ ಏಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವುದು ತಪ್ಪು. ಹಾಗಾಗಿ ಬಿಜೆಪಿ ಪಕ್ಷ ಆಕ್ಷೇಪ ಮಾಡಿದೆ. ತುಷ್ಟೀಕರಣದ ರಾಜಕಾರಣಕ್ಕೆ ಬಿಜೆಪಿಯ ವಿರೋಧ ಇದೆ. ಬಿಜೆಪಿ ಮುಸ್ಲಿಂ ವಿರೋಧಿಯೂ ಅಲ್ಲ, ಕ್ರಿಶ್ಚಿಯನ್ ವಿರೋಧಿಯೂ ಅಲ್ಲ ಎಂದು ಹೇಳಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಅವರು ಅಲ್ಲಿಗೆ ಹೋಗಿ ಯಾಕೆ ಭಾಷಣ ಮಾಡಬೇಕು ಎಂದು ಯು.ಟಿ.ಖಾದರ್ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯು.ಟಿ.ಖಾದರ್ ಅವರೂ ಕೂಡ ಬೇರೆ ಕಡೆಗೆ ಹೋಗಿ ಭಾಷಣ ಮಾಡುತ್ತಾರೆ. ಪೌರತ್ವ ಕಾಯ್ದೆ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ಅವರು ಎಲ್ಲಿ ಭಾಷಣ ಮಾಡಬೇಕು, ಎಲ್ಲಿ ಮಾಡಬಾರದು ಎನ್ನುವುದು ಅವರಿಗೇ ಬಿಟ್ಟಿದ್ದು. ಆಯಾ ಜಿಲ್ಲಾಡಳಿತ ಅದನ್ನು ನಿರ್ಧಾರ ಮಾಡುತ್ತದೆ ಎಂದು ಹೇಳಿದರು.