ಕಣ್ಣು ಮುಚ್ಚಿಕೊಂಡು ಹಾಲು ಕುಡಿದ್ರೆ ಜಗತ್ತಿಗೆ ಗೊತ್ತಾಗೋದಿಲ್ವಾ: ಡಿಕೆಶಿ

ಬೆಂಗಳೂರು: ಸುರ್ಜಿತ್ ನನ್ನ ಪಿಎ ಅಲ್ಲ, ಶ್ರೀರಾಮುಲು ಅಣ್ಣನವರ ಪಿಎ. ತಮ್ಮ ಪಿಎ ಅಲ್ಲದೇ ಹೋದರೆ ಅವರನ್ನು ಹಗಲು ರಾತ್ರಿ ಏಕೆ ಹಿಂದೆ ಇಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಶ್ರೀರಾಮುಲು ಅವರಿಗೆ ಸಚಿವ ಡಿ.ಕೆ.ಶಿವಕುಮಾರ್​ ಟಾಂಗ್​ ನೀಡಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಅಶ್ವಥ್ ನಾರಾಯಣ ಮೂರು ದಿನದ ಹಿಂದೆ ಬ್ರಿಗೇಡ್ ಟವರ್​ನಲ್ಲಿ ಯಾರನ್ನು ಭೇಟಿ ಮಾಡಿದ್ದರು ಎಂದು ಹೇಳಲಿ? ಜನಾರ್ದನ ರೆಡ್ಡಿ ನಿನ್ನೆ ರಾತ್ರಿ ಜಿಂದಾಲ್ ಆಸ್ಪತ್ರೆಯಲ್ಲಿ ಸುಧಾಕರ್​ರನ್ನು ಯಾಕೆ ಭೇಟಿ ಮಾಡಿದರು ಎಂದು ಹೇಳಲಿ? ಬೇಕಾದರೆ ಅವರು ಇನ್ನೂ ನೂರು ಜನರನ್ನು ಭೇಟಿ ಮಾಡಲಿ, ನೂರಾರು ಕೋಟಿ ಆಫರ್ ಮಾಡಲಿ. ಕಣ್ಣು ಮುಚ್ಚಿಕೊಂಡು ಹಾಲು ಕುಡಿದ್ರೆ ಜಗತ್ತಿಗೆ ಗೊತ್ತಾಗೋದಿಲ್ವಾ ಎಂದು ಕುಟುಕಿದರು.

ಹಂಪಿ ವಿಚಾರದಲ್ಲಿ ರಾಜಕೀಯ ಬೇಡ
ಹಂಪಿ ಉತ್ಸವದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ. ಉತ್ಸವ ಮಾಡಲು ಭಿಕ್ಷೆ ಬೇಡುತ್ತೇವೆಂದು ಹೇಳುತ್ತಾರೆ. ಆದರೆ, ಅದು ಭಿಕ್ಷೆಯಲ್ಲ. ಸುಲಿಗೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿದ್ದಾರೆ.

ಹಂಪಿ ಉತ್ಸವಕ್ಕೆ ಹಣ ನೀಡುತ್ತೇನೆ ಎಂಬ ಜನಾರ್ದನ ರೆಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕಾರಣ ಮಾಡಲು ಬೇರೆ ವಿಚಾರಗಳಿವೆ. ಈ ವಿಚಾರದಲ್ಲಿ ರಾಜಕಾರಣ ಮಾಡಬೇಡಿ. ಮೂರು ದಿನದಿಂದ ಎಲ್ಲೆಲ್ಲಿ ಏನೇನು ನಡೆಯಿತು ಎನ್ನುವುದು ನಮಗೆ ಗೊತ್ತಿದೆ ಎಂದರು.

ಹಂಪಿಗೆ ಹಾಗೂ ಕಲಾವಿದರಿಗೆ ಗೌರವ ಕೊಡಬೇಕು ಎಂಬುದು ನಮಗೆ ತಿಳಿದಿದೆ. ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ವರದಿ ಬಂದ ಬಳಿಕ ಹಂಪಿ ಉತ್ಸವದ ಬಗ್ಗೆ ತೀರ್ಮಾನಿಸಲಾಗುವುದು. ರಾಜ್ಯಾದ್ಯಂತ ತೀವ್ರ ಬರಗಾಲ ಇದೆ. ಅಧಿವೇಶನವೂ ನಡೆಯಬೇಕು. ಮೊದಲು ಜನರ ರಕ್ಷಣೆ ನಮಗೆ ಮುಖ್ಯ ಎಂದರು.

ಸರ್ಕಾರ ಸುಭದ್ರವಾಗಿರುತ್ತೆ ಎಂದು ಸಿಎಲ್‌‌ಪಿ‌ ಲೀಡರ್ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಹೇಳಿದ್ಮೇಲೆ ಮುಗೀತು. ಸಂಪುಟ ವಿಸ್ತರಣೆ ಬಗ್ಗೆ ದಿನೇಶ್ ಗುಂಡೂರಾವ್, ಪಕ್ಷದ ನಾಯಕರು‌ ನಿರ್ಧಿರಿಸುತ್ತಾರೆ ಎಂದರು.

ಜನಾರ್ದನ ರೆಡ್ಡಿ ಜಿಂದಾಲ್‌ನಲ್ಲಿ ಏನು ಮಾತನಾಡಿದ್ದರು. ಯಾವ ರೀತಿ ಒತ್ತಡ ಹೇರಿದರು ಎಂಬುದು ಗೊತ್ತಿದೆ. ಬೆಂಕಿಯಿಲ್ಲದೇ ಹೊಗೆಯಾಡುವುದಿಲ್ಲ. ನಾವೇನು ಕಣ್ಮುಚ್ಚಿಕೊಂಡು ಹಾಲು ಕುಡಿತಿಲ್ಲ ಎಂದರು. (ದಿಗ್ವಿಜಯ ನ್ಯೂಸ್)