ತಡರಾತ್ರಿಯೂ ಮುಂದುವರಿದ ಟ್ರಬಲ್​ ಶೂಟರ್​ ಕಾರ್ಯಾಚರಣೆ: ಕೈ ಶಾಸಕನಿಗಾಗಿ ಕಾದು ಕುಳಿತ ಡಿಕೆಶಿಗೆ ಮತ್ತೆ ನಿರಾಸೆ

ಬೆಂಗಳೂರು: ಪತನದ ಅಂಚಿನಲ್ಲಿರುವ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಅತೃಪ್ತರ ಮನವೊಲಿಕೆಯ ಕಸರತ್ತನ್ನು ಮಾಡುತ್ತಿರುವ ಸಚಿವ ಡಿ.ಕೆ.ಶಿವಕುಮಾರ್, ತಡರಾತ್ರಿಯೂ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದರು.

ನಿನ್ನೆ(ಬುಧವಾರ) ಅತೃಪ್ತರನ್ನು ಭೇಟಿ ಮಾಡಲು ಮುಂಬೈ ಹೋಟೆಲ್​ಗೆ ಹೋಗಿ ಪೊಲೀಸರಿಂದ ಅನುಮತಿ ಸಿಗದೆ, ಭೇಟಿಯಾಗುವವರೆಗೂ ಹಿಂದಿರುಗುವುದಿಲ್ಲ ಎಂದು ಪಟ್ಟುಬಿಡದೆ ಕುಳಿತಿದ್ದ ಡಿಕೆಶಿ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದು, ರಾಜಕೀಯ ಹೈಡ್ರಾಮ ಸೃಷ್ಟಿಯಾಗಿತ್ತು. ಅತೃಪ್ತರನ್ನು ಕೊನೆಗೂ ಭೇಟಿಯಾಗದೇ ತವರಿಗೆ ಸಪ್ಪೆ ಮೊರೆ ಹಾಕಿಕೊಂಡು ಹಿಂತಿರುಗಿದ ಡಿಕೆಶಿ ಮತ್ತೆ ತಡರಾತ್ರಿ ಕಾರ್ಯಾಚರಣೆಗೆ ಇಳಿದರು.

ಯಶವಂತಪುರ ಕಾಂಗ್ರೆಸ್​ ಶಾಸಕ ಎಸ್​.ಟಿ. ಸೋಮಶೇಖರ್ ಮನೆಗೆ ಬರುತ್ತಾರೆ ಎಂದು ಶಾಸಕರ ಮನೆಗೆ ಹೋಗಿ ಸತತ ಒಂದು ಗಂಟೆಗೂ ಹೆಚ್ಚಿನ ಕಾಲ ಡಿಕೆಶಿ ಕಾದು ಕುಳಿತಿದ್ದರು. ಸೋಮಶೇಖರ್ ಅವರ ಬಿಟಿಎಂ ಲೇಔಟ್ ಮನೆಗೆ ಆಪ್ತ ಕುಣಿಗಲ್ ಶಾಸಕ ಡಾ.ರಂಗನಾಥ್ ಜತೆ ರಾತ್ರಿ 1.30ರ ಸುಮಾರಿಗೆ ಡಿಕೆಶಿ ದೌಡಾಯಿಸಿದ್ದರು.

ಆದರೆ, ಡಿಕೆಶಿ ಮನೆಯಲ್ಲಿರುವ ವಿಷಯ ತಿಳಿದು ಮಾರ್ಗ ಮಧ್ಯೆಯೇ ದಾರಿ ಬದಲಿಸಿದ ಸೋಮಶೇಖರ್ ಅಜ್ಞಾತ ಸ್ಥಳಕ್ಕೆ ತೆರಳಿದರು. ಕೊನೆಗೂ ಸೋಮಶೇಖರ್ ಬರದಿದ್ದನ್ನು ಕಂಡ ಡಿಕೆಶಿ ಮತ್ತೆ ಸಪ್ಪೆ ಮೊರೆ ಹಾಕಿಕೊಂಡು ವಾಪಸ್ ಬರಬೇಕಾಯಿತು.

ಇದಕ್ಕೂ ಮುನ್ನ ಸೋಮಶೇಖರ್ ಮನೆಗೆ ಡಿಕೆಶಿ ಬಂದಿದ್ದಕ್ಕೆ ಪೊಲೀಸರು ದೌಡಾಯಿಸಿದರು. ರಾತ್ರೋರಾತ್ರಿ ಶಾಸಕರ ಮನೆಗೆ ಬಿಗಿ ಪೊಲೀಸ್​ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕೆಎಸ್ಆರ್​ಪಿ ತುಕಡಿ ಸೇರಿ 25 ಕ್ಕು ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *