ಬೆಂಗಳೂರು: ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ನ ಅನರ್ಹಗೊಂಡಿರುವ ಶಾಸಕರಲ್ಲಿ ಈಗ ಅಪನಂಬಿಕೆ ಉಂಟಾಗಿದೆ. ಮುಂಬೈನಲ್ಲಿರುವಷ್ಟು ದಿನ ಒಗ್ಗಟ್ಟು ಪ್ರದರ್ಶಿಸುತ್ತಿದ್ದ ಅನರ್ಹರು ಈಗ ವಿಭಿನ್ನ ನಡೆಯನ್ನಿಡುತ್ತಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಮುನಿರತ್ನ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದ ಸಂಗತಿ ಈಗ ಅತೃಪ್ತರ ಗುಂಪಿನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ರಮೇಶ್ ಜಾರಕಿಹೊಳಿ ಅವರನ್ನು ಶುಕ್ರವಾರ ಭೇಟಿಯಾದ ಶ್ರೀಮಂತ ಪಾಟೀಲ್ ಹಾಗೂ ಮಹೇಶ್ ಕುಮಠಳ್ಳಿ ಚರ್ಚೆ ವೇಳೆ ಮುನಿರತ್ನ ವಿಷಯ ಪ್ರಸ್ತಾಪಿಸಿದ್ದಾರೆ. ಅನರ್ಹತೆಗೆ ಒಳಗಾಗಿರುವ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು, ಸುಪ್ರೀಂಕೋರ್ಟ್ನಲ್ಲಿ ತೀರ್ಪು ಹೊರಬರುವ ತನಕ ಮಾಧ್ಯಮಗಳ ಮುಂದೆ ಮಾತನಾಡಬಾರದು, ಕಾಂಗ್ರೆಸ್-ಜೆಡಿಎಸ್ ಮುಖಂಡರನ್ನು ಭೇಟಿ ಮಾಡಬಾರದೆಂಬ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಮುನಿರತ್ನ ನಮ್ಮ ನಿರ್ಧಾರಗಳೆಲ್ಲವನ್ನೂ ಮುರಿದಿದ್ದಾರೆ.
ಡಿ.ಕೆ.ಶಿವಕುಮಾರ್ ಜತೆ ಮಾತುಕತೆಗೆ ಹೋಗುವ ಅಗತ್ಯವಾದರೂ ಏನಿತ್ತು? ನಮ್ಮನ್ನು ನಂಬಿರುವ ಬಿಜೆಪಿಗೆ ಹೇಗೆ ಸಮಜಾಯಿಷಿ ನೀಡುವುದು ಎಂದು ರಮೇಶ್ ಜಾರಕಿಹೊಳಿ ಗರಂ ಆಗಿದ್ದಾರೆಂದು ಆಪ್ತಮೂಲಗಳು ಖಚಿತಪಡಿಸಿವೆ. ಈ ರೀತಿಯಾದರೆ ಮುಂದಿನ ಕಾನೂನು ಹೋರಾಟ ನಡೆಸುವ ಬಗ್ಗೆಯೂ ಸಮಸ್ಯೆ ಉಂಟಾಗುತ್ತದೆ. ಎಲ್ಲರೂ ಮತ್ತೊಮ್ಮೆ ಸೇರಿ ಚರ್ಚೆ ನಡೆಸುವ ಅಗತ್ಯವಿದೆ ಎಂಬ ಕುರಿತು ರಮೇಶ್ ಅಭಿಪ್ರಾಯಪಟ್ಟರೆನ್ನಲಾಗಿದೆ.
ಅಂಗೀಕಾರವಾಗದೆ ಅನರ್ಹತೆ
ಬೆಂಗಳೂರು: ರಾಜೀನಾಮೆ ಅಂಗೀಕಾರವಾಗುತ್ತದೆ ಎಂದುಕೊಂಡಿದ್ದರೆ, ಅನರ್ಹರಾಗಿದ್ದೇವೆ. ಈಗ ಕ್ಷೇತ್ರದಲ್ಲಿ ಮುಖ ತೋರಿಸುವುದು ಹೇಗೆ? ಎಂದು ಕಾಗವಾಡದ ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ. ಅನಾರೋಗ್ಯದ ನೆಪವೊಡ್ಡಿ ಮುಂಬೈನಲ್ಲಿ ಆಸ್ಪತ್ರೆ ಸೇರಿದ್ದ ಪಾಟೀಲ್ ದಿಢೀರ್ ಆಗಿ ಬೆಂಗಳೂರಿನ ಜಾರಕಿಹೊಳಿ ನಿವಾಸದಲ್ಲಿ ಶುಕ್ರವಾರ ಪ್ರತ್ಯಕ್ಷರಾದರು. ರಾಜೀನಾಮೆ ಅಂಗೀಕಾರದ ಭರವಸೆ ಇತ್ತು. ಆದ್ದರಿಂದಲೇ ವಿಪ್ ಉಲ್ಲಂಘನೆ ಮಾಡಿ ಬಂದೆ, ಆನಂತರ ರಾಜೀನಾಮೆ ಸಲ್ಲಿಸುವ ಉದ್ದೇಶ ಹೊಂದಿದ್ದೆ, ಆದರೀಗ ಆಗಿರುವುದೇ ಬೇರೆ. ನ್ಯಾಯಾಲಯದಲ್ಲಿಯೂ ನಮಗೆ ನ್ಯಾಯ ಸಿಗುತ್ತದೆ ಎಂಬ ಗ್ಯಾರಂಟಿ ಏನು ಎಂದು ಅವರು ಪ್ರಶ್ನಿಸಿದ್ದಾರೆ.
ಶ್ರೀಮಂತ ಪಾಟೀಲ್ರನ್ನು ಸಮಾಧಾನ ಮಾಡಿರುವ ಜಾರಕಿಹೊಳಿ, ನ್ಯಾಯಾಲಯದಲ್ಲಿ ಖಂಡಿತ ನಮ್ಮ ಪರವಾಗಿ ತೀರ್ಪು ನೀಡುತ್ತದೆ. ಆ ಬಗ್ಗೆ ಆತಂಕ ಬೇಡ, ನಂತರ ನಿಮಗೆ ಎಲ್ಲ ರೀತಿಯಲ್ಲಿ ಅನುಕೂಲವಾಗುತ್ತದೆ ಎಂದು ಭರವಸೆ ನೀಡಿದರೆಂದು ಗೊತ್ತಾಗಿದೆ. ರಮೇಶ್ ಭೇಟಿ ನಂತರ ಮಾಧ್ಯಮಗಳು ಶ್ರೀಮಂತ ಪಾಟೀಲ್ರನ್ನು ಮಾತನಾಡಿಸಲು ಯತ್ನಿಸಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.