ಡಿಕೆಶಿ ಅಕ್ರಮ ಹಣ ಪತ್ತೆ ಪ್ರಕರಣ: ಇ.ಡಿ. ವಿಚಾರಣೆಗೆ ಹಾಜರಾದ ಲಕ್ಷ್ಮೀ ಹೆಬ್ಬಾಳ್ಕರ್‌, ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಬೆಚ್ಚಿಬಿದ್ದ ಲಕ್ಷ್ಮೀ

ನವದೆಹಲಿ: ಮಾಜಿ ಸಚಿವ ಡಿ ಕೆ ಶಿವಕುಮಾರ್‌ ವಿರುದ್ಧದ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಗುರುವಾರ ಜಾರಿ ನಿರ್ದೇಶನಾಲಯದ ಎದುರಿಗೆ ವಿಚಾರಣೆಗೆ ಹಾಜರಾದರು.

ಇದೇ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಹೆಬ್ಬಾಳ್ಕರ್‌, ಇ.ಡಿ. ಅಧಿಕಾರಿಗಳು ನನಗೆ ನೀಡಿರುವ ಸಮನ್ಸ್‌ ಹಿಂದೆ ಸೇಡಿನ ರಾಜಕೀಯವಿದೆ ಎಂದು ಆರೋಪಿಸಿದ್ದರು.

ಇ.ಡಿ. ಅಧಿಕಾರಿಗಳಾದ ಸೌರಭ್ ಮೆಹ್ತಾ ಮತ್ತು ತಂಡದಿಂದ ಕಳೆದ ಒಂದೂವರೆ ಗಂಟೆಯಿಂದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ವಿಚಾರಣೆ ನಡೆಸಲಾಗುತ್ತಿದ್ದು, ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಲಕ್ಷ್ಮೀ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ. ಬೆಳಗ್ಗೆ 11 ಗಂಟೆಯಿಂದ ವಿಚಾರಣೆ ಆರಂಭವಾಗಿದ್ದು, ಡಿ.ಕೆ.ಶಿವಕುಮಾರ್ ಆಸ್ತಿಗೂ ನಿಮಗೂ ಏನು ಸಂಬಂಧ? ಮತ್ತು ತಾವು ಗಳಿಸಿರುವ ಆಸ್ತಿ-ಪಾಸ್ತಿ ಬಗ್ಗೆಯೂ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್‌ 14ರಂದು ಸಮನ್ಸ್‌ ಜಾರಿ ಮಾಡಿದ್ದ ಇ.ಡಿ. ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಆದರೆ, ತನ್ನ ಕ್ಷೇತ್ರದಲ್ಲಿ ಪ್ರವಾಹ ಪರಿಹಾರ ಕಾರ್ಯದಲ್ಲಿ ನಿರತವಾಗಿರುವುದರಿಂದಾಗಿ ವಿಚಾರಣೆಯಿಂದ ವಿನಾಯಿತಿ ನೀಡಬೇಕೆಂದು ಜಾರಿ ನಿರ್ದೇಶನಾಲಯವನ್ನು ಕೇಳಿದ್ದರು. ಅಲ್ಲದೆ, ವಿಚಾರಣೆಯನ್ನು ಬೆಂಗಳೂರಿನಲ್ಲೇ ನಡೆಸಬೇಕೆಂದು ಮನವಿ ಮಾಡಿದ್ದರು. ಆದರೆ ಇ.ಡಿ.ಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲದಿದ್ದರಿಂದಾಗಿ ಇಂದು ದೆಹಲಿಗೆ ತೆರಳಿ ಇ.ಡಿ.ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ದೆಹಲಿಯ ನಿವಾಸದಲ್ಪಿ ಪತ್ತೆಯಾದ ಹಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಾಜಿ ಸಚಿವ ಡಿ ಕೆ ಶಿವಕುಮಾರ್‌ ವಿರುದ್ಧ ಕಳೆದ ವರ್ಷ ಚಾರ್ಜ್‌ ಶೀಟ್‌ ಸಲ್ಲಿಸಿತ್ತು. ಬಳಿಕ ಇ.ಡಿ. ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೋಟ್ಯಂತರ ರೂಪಾಯಿಯ ತೆರಿಗೆ ವಂಚನೆ ಮತ್ತು ಹವಾಲಾ ಹಣ ವರ್ಗಾವಣೆಯ ಆರೋಪ ಎದುರಾಗಿದ್ದು, ಪುತ್ರಿ ಐಶ್ವರ್ಯಾರನ್ನು ಕೂಡ ಇ.ಡಿ. ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *