VIDEO| ಒಡಿಶಾದಲ್ಲಿ ಫೊನಿ ಚಂಡಮಾರುತದ ಅಬ್ಬರ: ಗಂಟೆಗೆ 175 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಗಾಳಿ

ಭುವನೇಶ್ವರ: ಫೊನಿ ಚಂಡಮಾರುತ ಅಬ್ಬರ ಆರಂಭವಾಗಿರುವ ಹಿನ್ನೆಲೆಯಲ್ಲಿ ಒಡಿಶಾದಲ್ಲಿರುವ ರಕ್ಷಣಾ ಹಾಗೂ ಪರಿಹಾರ ಸಂಸ್ಥೆಗಳು ತೀವ್ರ ನಿಗಾವಹಿಸಿವೆ. ಶುಕ್ರವಾರ ಬೆಳಗ್ಗೆ ಸುಮಾರು 8 ಗಂಟೆಗೆ ಒಡಿಶಾದ ಪುರಿಯಲ್ಲಿ ಆರಂಭವಾದ ಫೊನಿ ಅಬ್ಬರದಿಂದ ಹಲವು ಕಡೆ ಭೂಕುಸಿತಗಳು ಸಂಭವಿಸಿದೆ. ಗಂಟೆಗೆ ಅಂದಾಜು 175 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಮೂರು ಗಂಟೆವರೆಗೆ ಭೂಸಿತದ ಪ್ರಕ್ರಿಯೆ ನಡೆಯುತ್ತದೆ ಎಂದು ಭಾರತೀಯ ಹವಮಾನ ಇಲಾಖೆಯ ಸೈಕ್ಲೊನ್​ ಎಚ್ಚರಿಕೆ ವಿಭಾಗದ ಉಸ್ತುವಾರಿ ಮೃತುಂಜಯ್​ ಮೊಹಪಾತ್ರ ಅವರು ತಿಳಿಸಿದ್ದಾರೆ.

ಚಂಡಮಾರುತದ ಅಬ್ಬರಕ್ಕೆ 11.5 ಲಕ್ಷಕ್ಕೂ ಹೆಚ್ಚು ಮಂದಿ ಹಾನಿಗೊಳಗಾಗುವ ಸಾಧ್ಯತೆ ಇದ್ದು, ಈಗಾಗಲೇ 13 ಜಿಲ್ಲೆಗಳ ಜನರನ್ನು ಸೈಕ್ಲೊನ್​ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದ ಅಬ್ಬರಕ್ಕೆ ಭಾರಿ ಪ್ರಮಾಣದಲ್ಲಿ ಮರಗಳು ಧರೆಗುರುಳಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಭಾರಿ ಮಳೆಯಾಗುತ್ತಿರುವ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಕಡಲ ತೀರದಲ್ಲಿ ಅಲೆಯ ಅಬ್ಬರ ಜೋರಾಗಿದ್ದು, ಕಡಲತೀರದ ಜನರನ್ನು ಈಗಾಗಲೇ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಪಡೆಗಳು ಸನ್ನದ್ಧರಾಗಿದ್ದು, ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

ಈಗಾಗಲೇ ಒಡಿಶಾದಲ್ಲಿನ ಭದ್ರಕ್​-ವಿಜಯನಗರಂ ವಿಭಾಗದ(ಕೊಲ್ಕತ-ಚೆನ್ನೈ ಮಾರ್ಗ) ರೈಲ್ವೆ ಕಾರ್ಯಾವರಣೆಯನ್ನು ಸ್ಥಗಿತಗೊಳಿಸಲಾಗಿದೆ. ಶನಿವಾರದವರೆಗೂ ರೈಲ್ವೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, 83 ಪ್ಯಾಸೆಂಜರ್​ ರೈಲು ಸೇರಿದಂತೆ 140 ರೈಲುಗಳ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. (ಏಜೆನ್ಸೀಸ್​)