ಫೊನಿ ಚಂಡಮಾರುತದ ರೌದ್ರಾವತಾರಕ್ಕೆ 2 ಬಲಿ: ಚುನಾವಣಾ ಸಮಾವೇಶಗಳು ರದ್ದು, ಇಡೀ ದೇಶವೆ ನಿಮ್ಮೊಂದಿಗಿದೆ ಎಂದ ಪ್ರಧಾನಿ

ಭುವನೇಶ್ವರ: ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗಕ್ಕೆ ಅಪ್ಪಳಿಸಿದ ಅತಿದೊಡ್ಡ ಮಾರುತಗಳಲ್ಲಿ ಫೊನಿ ಚಂಡಮಾರುತ ಒಂದು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಒಡಿಶಾದ ಕರಾವಳಿ ಭಾಗಕ್ಕೆ ಬಂದು ಅಪ್ಪಳಿಸಿದ ಫೊನಿ ಮಾರುತ ಭಾರಿ ಬಿರುಗಾಳಿ ಸಹಿತ ಮಳೆಯೊಂದಿಗೆ ತನ್ನ ರೌದ್ರ ನರ್ತನವನ್ನು ಮುಂದುವರಿಸುತ್ತಲೇ ಇದೆ. ಗಂಟೆಗೆ ಸುಮಾರು 175 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಚಂಡಮಾರುತ್ತಕ್ಕೆ ಅಕ್ಷರಶಃ ಒಡಿಶಾ ತತ್ತರಿಸಿ ಹೋಗಿದೆ.

ಫೊನಿಯ ಅಬ್ಬರಕ್ಕೆ ಸಿಲುಕಿ ಒಡಿಶಾದ ಹಲವೆಡೆ ಮರಗಳು ಧರೆಗುರುಳಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಿದ್ಯುತ್​ ಸಂಪರ್ಕ, ರೈಲು, ವಿಮಾನ ಸಂಚಾರ ಸ್ಥಗಿತಗೊಂಡಿದೆ. ಕೆಲವೆಡೆ ದೂರವಾಣಿ ಸಂಪರ್ಕವೂ ಸ್ಥಗಿತಗೊಂಡಿದೆ. ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ಇದುವರೆಗೂ 2 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಮೊದಲೇ ಚಂಡ ಮಾರುತ ಬಗ್ಗೆ ಮಾಹಿತಿ ತಿಳಿದಿದ್ದರಿಂದ ಜನರನ್ನು ಬೇರೆಡೆ ಸ್ಥಳಾಂತರಿಸುವುದರಿಂದ ಅಪಾರ ಪ್ರಾಣ ಹಾನಿಯಾಗಿಲ್ಲ. ಆದರೆ, ಸಾಕಷ್ಟು ಆಸ್ತಿ ನಷ್ಟ ಉಂಟಾಗಿದೆ. ರಕ್ಷಣಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಚುನಾವಣಾ ಸಮಾವೇಶಗಳೂ ಕೂಡ ರದ್ದಾಗಿದ್ದು, ಫೋನಿ ಚಂಡಮಾರುತ್ತ ಒಡಿಶಾ ರಾಜ್ಯದಲ್ಲಿ ಬೀರಿರುವ ಪರಿಣಾಮಗಳೇನು ಎಂಬುದರ ಮಾಹಿತಿ ಈ ಕೆಳಕಂಡಂತಿದೆ.

ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣೆ ಸಮಿತಿಯಿಂದ ನಿರ್ವಹಣೆ
24 ಗಂಟೆಯಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಒಡಿಶಾದ ಸುಮಾರು 10 ಸಾವಿರ ಹಳ್ಳಿಗಳು, 52 ನಗರಗಳು ಹಾಗೂ 9 ಜಿಲ್ಲೆಗಳಲ್ಲಿ ಫೋನಿ ಪ್ರಭಾವದಿಂದ ಉಂಟಾಗಿರುವ ತುರ್ತು ಪರಿಸ್ಥಿತಿಯನ್ನು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣೆ ಸಮಿತಿ(ಎನ್​ಸಿಎಂಸಿ)ಯು ನಿರ್ವವಹಣೆ ಮಾಡುತ್ತಿರುವ ಬಗ್ಗೆ ಎನ್​ಸಿಎಂಸಿ ಸಭೆಯ ಬಳಿಕ ನೇತೃತ್ವ ವಹಿಸಿದ್ದ ಕ್ಯಾಬಿನೆಟ್ ಕಾರ್ಯದರ್ಶಿ ಪಿ.ಕೆ. ಸಿನ್ಹಾ ತಿಳಿಸಿದ್ದಾರೆ.

ಇಬ್ಬರು ಸತ್ತಿರುವ ಬಗ್ಗೆ ಮಾಹಿತಿ ಖಚಿತ
ಫೊನಿ ಚಂಡಮಾರುತದ ಭೀಕರ ಹೊಡೆತಕ್ಕೆ ಒಡಿಶಾ ರಾಜ್ಯಾದ್ಯಂತ ಇಬ್ಬರು ಸಾವಿಗೀಡಾರುವ ಬಗ್ಗೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆಶ್ರಯ ತಾಣದಲ್ಲಿದ್ದ ಓರ್ವ ಹಿರಿಯ ವ್ಯಕ್ತಿ ಹೃದಯಾಘಾತದಿಂದ ಸಾವಿಗೀಡಾಗಿದ್ದರೆ, ಎಚ್ಚರಿಕೆಯ ನಡುವೆಯೂ ಮನೆಯಿಂದ ಹೊರಹೋದ ವ್ಯಕ್ತಿಯೊಬ್ಬನ ಮೇಲೆ ಮರ ಬಿದ್ದು ಮೃತಪಟ್ಟಿದ್ದಾನೆ ಎಂದು ಒಡಿಶಾ ರಾಜ್ಯದ ವಿಶೇಷ ಪರಿಹಾರ ಇಲಾಖೆಯ ಆಯುಕ್ತ ಬಿಷ್ಣುಪಾದಾ ಸೇಥಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿ ಭರವಸೆ
ಫೊನಿ ಚಂಡಮಾರುತ್ತಕ್ಕೆ ಸಿಲುಕಿರುವ ರಾಜ್ಯಗಳ ಸಂಪರ್ಕದಲ್ಲಿ ಕೇಂದ್ರ ಸರ್ಕಾರವಿದೆ. ಇಡೀ ದೇಶವೇ ನಿಮ್ಮೊಂದಿಗೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಹಿಂದೂನ್​ನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಸಮಾವೇಶ ರದ್ದು
ಫೊನಿ ಅಬ್ಬರ ಕಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಸಮಾವೇಶವನ್ನು ರದ್ದುಪಡಿಸಿದ್ದಾರೆ. ಫೊನಿ ಮಾರುತ ಪಶ್ಚಿಮ ಬಂಗಾಳದ ಮೇಲೂ ಪ್ರಭಾವ ಬೀರಬಹುದೆಂಬುದನ್ನು ಅರಿತು ಮುಂದಿನ 48 ಗಂಟೆವರೆಗೆ ಯಾವುದೇ ಸಮಾವೇಶ ನಡೆಸದಿರಲು ನಿರ್ಧಾರ ಕೈಗೊಂಡಿದ್ದಾರೆ. ಸದ್ಯ ಮಮತಾ ಅವರು ಬಂಗಾಳದ ಕರಾವಳಿ ತೀರ ಪ್ರದೇಶದ ಬಳಿಯಿರುವ ಖರಗ್​ಪುರನಲ್ಲಿ ಉಳಿದುಕೊಂಡಿದ್ದು, ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಅಮಿತ್​ ಷಾ ಸಮಾವೇಶವೂ ರದ್ದು
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಕೂಡ ಜಾರ್ಖಂಡ್​ನಲ್ಲಿ ಇಂದು ನಡೆಯಬೇಕಿದ್ದ ಮೂರು ಸಮಾವೇಶಗಳನ್ನು ರದ್ದುಪಡಿಸಿದ್ದಾರೆ. ಫೊನಿ ಚಂಡಮಾರುತ ಪ್ರಭಾವದಿಂದ ಜಾರ್ಖಂಡ್​ ರಾಜ್ಯದಲ್ಲಿ ಹವಾಮಾನ ಪರಿಸ್ಥಿತಿ ಹದಗೆಟ್ಟಿರುವುದರಿಂದ ಸಮಾವೇಶ ರದ್ದಾಗಿದೆ.

ಅಪಾರ ಮನೆ ಹಾನಿ, ಧರೆಗುರುಳಿದ ಮರಗಳು
ಸುಮಾರು 150 ರಿಂದ 175 ಕಿ.ಮೀ ವೇಗದಲ್ಲಿ ಕೆಲವೆಡೆ 180 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಫೊನಿ ಚಂಡಮಾರುತ್ತಕ್ಕೆ ಅಪಾರ ಮನೆಗಳು ಹಾನಿಯಾಗಿದ್ದು, ಸಾವಿರಾರು ಮರಗಳು, ವಿದ್ಯುತ್​ ಕಂಬಗಳು ಧರೆಗುರುಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.(ಏಜೆನ್ಸೀಸ್​)

Leave a Reply

Your email address will not be published. Required fields are marked *