ಪಶ್ಚಿಮ ಬಂಗಾಳದಲ್ಲಿ ಮುಂಜಾನೆಯಿಂದ ಫೊನಿ ಅಬ್ಬರ: ಮಧ್ಯಾಹ್ನದ ವೇಳೆ ಬಾಂಗ್ಲಾದೇಶ ಪ್ರವೇಶಿಸುವ ಸಾಧ್ಯತೆ

ಕೋಲ್ಕತ: ಎರಡು ದಶಕಗಳ ಅವಧಿಯಲ್ಲಿ ಭಾರತ ಕಂಡ ಅತ್ಯಂತ ಪ್ರಬಲ ಚಂಡಮಾರುತ ಎಂಬ ದಾಖಲೆಯೊಂದಿಗೆ ಆರ್ಭಟಿಸುತ್ತಿರುವ ಫೊನಿ ಒಡಿಶಾದಲ್ಲಿ ಹಾನಿ ಮಾಡಿದ ಬಳಿಕ ಇಂದು ಮುಂಜಾನೆ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ್ದು, ಭಯಂಕರ ಗಾಳಿಯೊಂದಿಗೆ ರಭಸದ ಮಳೆ ಬರುತ್ತಿದೆ. ಈಗಾಗಲೇ ಅನೇಕ ಮರಗಿಡಗಳನ್ನು ನೆಲಸಮಗೊಳಿಸಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸದ್ಯ ತೀವ್ರ ವೇಗದೊಂದಿಗೆ ಬೀಸುತ್ತಿರುವ ಚಂಡಮಾರುತ ಶೀಘ್ರವೇ ದುರ್ಬಲಗೊಳ್ಳಲಿದ್ದು ಇಂದು ಮಧ್ಯಾಹ್ನದ ಬಳಿಕ ಬಾಂಗ್ಲಾದೇಶದತ್ತ ಸಾಗಲಿದೆ.

ಕೋಲ್ಕತದ ಕರಾವಳಿ ಪ್ರದೇಶವಾದ ದಿಗಾಕ್ಕೆ ಮುಂಜಾನೆಯೇ ಪ್ರವೇಶಿಸಿರುವ ಉಗ್ರಸ್ವರೂಪದ ಚಂಡಮಾರುತದಿಂದ ರಾಜ್ಯದ ವಾತಾವರಣದಲ್ಲಿ ಈಗಾಗಲೇ ತೀವ್ರ ಏರುಪೇರಾಗಿದೆ. ಕೋಲ್ಕತ ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಂಡಿದ್ದು, ಸಮುದ್ರ ಮಟ್ಟದಿಂದ ಕಡಿಮೆ ಎತ್ತರದಲ್ಲಿದ್ದು ಬಿರುಗಾಳಿಯಿಂದ ಹಾನಿಗೊಳಗಾಗುವ ಪ್ರದೇಶದಲ್ಲಿ ವಾಸವಾಗಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಿದೆ. ವಿಪತ್ತು ನಿರ್ವಹಣಾ ತುರ್ತು ಪಡೆಯ ಆರು ತಂಡಗಳನ್ನು ವಿವಿಧ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಪಶ್ಚಿಮ ಬಂಗಾಳಕ್ಕೆ ಫೊನಿ ಅಪ್ಪಳಿಸಲಿದೆ ಎಂದು ಗೊತ್ತಾದ ಬಳಿಕ ಇಲ್ಲಿನ ವಿಮಾನಗಳು, ರೈಲ್ವೆ ಸೇವೆಗಳನ್ನು ನಿಲ್ಲಿಸಲಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್​ ಷಾ ಅವರ ಪ್ರಚಾರ ಸಭೆಗಳೂ ರದ್ದುಗೊಂಡಿದ್ದು, ಭಾನುವಾರ ನಡೆಯಲಿದೆ.

ಫೊನಿ ಇಂದು ಮಧ್ಯಾಹ್ನದ ವೇಳೆ ಬಾಂಗ್ಲಾದೇಶವನ್ನು ಪ್ರವೇಶಿಸಲಿದ್ದು, ಈಗಾಗಲೇ ಅಲ್ಲಿನ 5 ಲಕ್ಷ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲಾಗಿದೆ.

ನಿನ್ನೆ ಒಡಿಶಾ ಕಡಲತೀರಕ್ಕೆ ಪ್ರತಿ ಗಂಟೆಗೆ 200 ಕಿಮೀ ವೇಗದಲ್ಲಿ ಅಪ್ಪಳಿಸಿದ್ದ ಚಂಡಮಾರುತ ಇಂದು ಪಶ್ಚಿಮ ಬಂಗಾಳಕ್ಕೆ 70-80 ಕಿಮೀ ವೇಗದಲ್ಲಿ ಅಪ್ಪಳಿಸಿದೆ. ಇನ್ನು 6 ಗಂಟೆಗಳಲ್ಲಿ ಬಾಂಗ್ಲಾದೇಶಕ್ಕೆ 65 ಕಿಮೀ ವೇಗದಲ್ಲಿ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.