ಸೈಕ್ಲಿಂಗ್​ ಯುವಜನರ ಕ್ರೇಜ್

|ವೇಣುವಿನೋದ್ ಕೆ.ಎಸ್. ಮಂಗಳೂರು

ಕೆಲವು ದಶಕಗಳ ಹಿಂದಿನ ದಿನಗಳನ್ನು ನೆನಪಿಸಿಕೊಂಡರೆ…

ಟ್ರಿಣ್​ಟ್ರಿಣ್ ಟ್ರಿಣ್​ಟ್ರಿಣ್ ಅಂತ ಬೆಲ್ ಬಾರಿಸುತ್ತಾ ಮನೆ ಬಾಗಿಲಿಗೆ ಬರುತ್ತಿದ್ದ ಅಂಚೆಯಣ್ಣನ ಸೈಕಲ್, ಅಲ್ಲಿದ್ದವರಿಗೆಲ್ಲ ಆಪ್ಯಾಯಮಾನವಾಗಿ ಕಾಣಿಸುತ್ತಿತ್ತು. ಅದರ ಸರಳ ತ್ರಿಕೋನಾಕೃತಿಯ ದೇಹದ ಮೇಲೆ ತ್ರಿಕೋನಾಕಾರದ್ದೇ ಒಂದು ಸೀಟು, ತುಸು ಬಾಗಿ ಹಿಡಿಯಬೇಕಾದ ಹ್ಯಾಂಡಲ್, ಹಿಂದಿನ ಟೈರಿನ ರಿಮ್ೆ ಉಜ್ಜುತ್ತಾ ವಿದ್ಯುತ್ ಉತ್ಪಾದಿಸಿ ಮುಂದಿರುತ್ತಿದ್ದ ಡೈನಮೊಗೆ ಬೆಳಕು ಪೂರೈಸುತ್ತಿದ್ದ ಸಣ್ಣ ಸ್ಟೀಲ್ ಡಬ್ಬ… ಇವೆಲ್ಲವೂ ಕೌತುಕದ ವಸ್ತುಗಳು. ಸಾದಾ ಸೈಕಲ್​ಗಳೇ ನಮ್ಮ ಹಿರಿಯರ ಪ್ರಧಾನ ವಾಹನಗಳೂ ಆಕರ್ಷಣೆಯ ಕೇಂದ್ರಗಳೂ ಆಗಿದ್ದವು. ವ್ಯಾಪಾರಿಗಳು, ಗ್ರಾಹಕರು, ಶಿಕ್ಷಕರು, ಮಕ್ಕಳಿಗೆ ಸಂಚಾರಕ್ಕೆ ಸೈಕಲ್​ಗಳೇ ಆಧಾರವಾಗಿದ್ದವು. ನಿಧಾನಕ್ಕೆ ರಸ್ತೆಗಳು ಉತ್ತಮಗೊಂಡವು, ಸ್ಕೂಟರ್, ಮೋಟರ್ ಬೈಕ್​ಗಳ ಮಾಯಾಲೋಕ ತೆರೆದುಕೊಂಡಿತು. ಮತ್ತೆ ಕೆಲ ವರ್ಷಗಳಲ್ಲಿ ಕಾರ್​ಗಳೂ ಸುಲಭವಾಗಿ ಕೈಗೆಟುಕತೊಡಗಿದವು. ನಿಧಾನವಾಗಿ ಸೈಕಲ್ ಎನ್ನುವುದು ಕೇವಲ ಬಡವರ ಸೊತ್ತು ಎಂಬ ಕಲ್ಪನೆ ಸಮಾಜದಲ್ಲಿ ಬರತೊಡಗಿತು. ಹೊಸ ಉದ್ಯೋಗ ಹಿಡಿದವರು ಸ್ವಲ್ಪ ಹಣ ಸೇರಿಸಿ ಬೈಕನ್ನೇ ಕೊಳ್ಳುವೆ ಎಂಬ ಗುರಿ ಇರಿಸಿಕೊಳ್ಳುವಂತಾಯಿತು. ಉದ್ಯೋಗ ಸೇರಿ ಸ್ವಲ್ಪ ವರ್ಷದಲ್ಲೇ ಒತ್ತಡದ ವಾತಾವರಣ, ಹೊಗೆ – ಧೂಳಿನ ನಗರ, ನಡುವೆ ಅಕಾಲಕ್ಕೆ ಬೇಕಾಬಿಟ್ಟಿ ಆಹಾರ ಇವು ಸೇರಿಕೊಂಡು ಬೈಕ್-ಕಾರುಗಳಲ್ಲಿ ಸುತ್ತಾಡುವವರನ್ನು ಕಂಗೆಡಿಸುತ್ತಿದೆ. ಹಣ ಇದೆ, ಖುಷಿ ಇಲ್ಲ, ಬೇಕಾದ್ದೆಲ್ಲ ಇದೆ ಆರೋಗ್ಯ ಇಲ್ಲ ಎಂಬ ಮನಸ್ಥಿತಿಯಿಂದ ಅನೇಕರು ಕಂಡು ಕೊಂಡ ಮೆಚ್ಚಿನ ಹುಚ್ಚು ಸೈಕ್ಲಿಂಗ್! ಫಿಟ್​ನೆಸ್ ಗುರಿ, ಹವ್ಯಾಸದ ಖುಷಿ, ಊರು ಸುತ್ತುವ ಬಯಕೆ ಇವೆಲ್ಲವನ್ನೂ ಈಡೇರಿಸಿಕೊಡಬಲ್ಲ ಚಟುವಟಿಕೆ ಯಾವುದಾದರೂ ಇದ್ದರೆ ಅದು ಸೈಕ್ಲಿಂಗ್.

ಯಾಕೆ ಆಪ್ಯಾಯಮಾನ

ಅನೇಕರಿಗೆ ಸೈಕ್ಲಿಂಗ್ ಎಂದರೆ ಅದು ಬಾಲ್ಯಕ್ಕೆ ಮರಳಿದ ಹಾಗೆ. ಸೈಕಲ್ ನೋಡುತ್ತಲೇ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಇಂಧನ ತುಂಬುವ ಗೊಡವೆ ಬೇಡ. ಎದ್ದು ಹೊರಟುಬಿಟ್ಟರೆ ಯಾವ ಓಣಿಯಲ್ಲಿ ಬೇಕಾದರೂ ನುಗ್ಗಿ ಆಚೆ ಬರಬಹುದು. ಆಗದಿದ್ದರೆ ತಳ್ಳಿಕೊಂಡೂ ಹೋಗಬಹುದು. ಅಷ್ಟೇ ಅಲ್ಲ, ಈಗ ಮತ್ತೆ ಸೈಕ್ಲಿಂಗ್​ಗೆ ಯುವಜನರ ಮನಸು ತೀವ್ರವಾಗಿ ಹೊರಳುತ್ತಿದೆ. ವಾರದುದ್ದಕ್ಕೂ ಮುಂಜಾನೆ 30-40 ಕಿಲೋ ಮೀಟರ್ ಸೈಕಲ್ ತುಳಿದು ವಾರಾಂತ್ಯಕ್ಕೆ ದೀರ್ಘ ಯಾನ ಮಾಡಿ ನಗರದ ಹೊರಗೆ ಹೋಗಿ ಮೈಮನಸ್ಸುಗಳನ್ನು ರಿಚಾರ್ಜ್ ಮಾಡಿಕೊಳ್ಳುತ್ತಾರೆ. ಮತ್ತೆ ಸೋಮವಾರಕ್ಕೆ ತನುಮನವೆರಡೂ ಖುಷಿ ಖುಷಿ.

ಟೆಕ್ಕಿಗಳು, ವೈದ್ಯರು, ಮಾಧ್ಯಮದವರು ಹೀಗೆ ಯಾವುದೇ ಕ್ಷೇತ್ರವನ್ನೂ ಬಿಟ್ಟಿಲ್ಲ ಈ ಕ್ರೇಜ್. ಕೆಲವರಿಗೆ ಸೈಕ್ಲಿಂಗ್ ಒತ್ತಡದ ಬದುಕಿನಿಂದ ಬಿಡಿಸಿಕೊಳ್ಳುವ ತಂತ್ರ. ಇನ್ನು ಕೆಲವರಿಗೆ ಫ್ಯಾಶನ್. ಕೆಲವರಿಗೆ ಹುಚ್ಚು, ಮತ್ತೆ ಅನೇಕರಿಗೆ ಅದೊಂದು ಕ್ರೀಡೆ. ಕೆಲವರಿಗೆ ಅದರಲ್ಲಿ ಊರೂರು ಸುತ್ತಿ ಅಲ್ಲಿನ ವಿಶೇಷ ತಿಳಿದುಕೊಳ್ಳುವ ಹಂಬಲ.. ಹೀಗೆ ಒಬ್ಬೊಬ್ಬರಿಗೂ ಅವರದ್ದೇ ಆದ ವ್ಯಾಖ್ಯಾನ.

ಹೀಗಿದೆ ಸೈಕ್ಲಿಂಗ್ ಲೋಕ

ಹಿಂದಿನ ಸರಳ ಸೈಕಲ್​ಗಳಿಗೂ ಈಗಿನ ಮಾಡರ್ನ್ ಯುಗದ ಸೈಕಲ್​ಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಆಧುನಿಕ ಸೈಕಲ್​ಗಳಿಗೆ ಗೇರ್​ಗಳಿವೆ, ಕಬ್ಬಿಣದ ಬದಲು ಅಲಾಯ್(ಮಿಶ್ರಲೋಹ, ತುಕ್ಕು ನಿರೋಧಕ) ಫ್ರೇಮ್ಂದಾಗಿ ತೂಕವೂ ಕಡಿಮೆ. ತುಸು ದುಬಾರಿಯೆನಿಸಿದರೂ ಒಮ್ಮೆ ಕೊಂಡ ಬಳಿಕ ಕಿರಿಕಿರಿಗಳಿರುವುದಿಲ್ಲ. ಹಿಂದಿನ ಮಾದರಿಗಳಿಗೂ ಈಗಿನವುಗಳಿಗೂ ವ್ಯತ್ಯಾಸವೆಂದರೆ ಈಗ ದೂರದೂರಕ್ಕೂ ಸವಾರಿ ಮಾಡುವ ಅನುಕೂಲ. ವಿವಿಧ ಅನುಪಾತದ ಗೇರ್​ಗಳಿಂದಾಗಿ ಎಂತಹ ಚಡಾವುಗಳನ್ನೂ ಏರಿ ನಗೆ ಬೀರಬಹುದು.

ನಾನೂ ಸೈಕ್ಲಿಂಗ್ ಮಾಡಬೇಕು, ಯಾವ ಸೈಕಲ್ ಕೊಳ್ಳಲಿ ಎಂದು ಹೊಸಬರೊಬ್ಬರು ಕೇಳಿದರೆ ಅವರಿಗೆ ಸಿಗುವ ಉತ್ತರ ತೀರ ಗೊಂದಲ ಮೂಡಿಸಬಹುದು! ಯಾಕೆ ಗೊತ್ತೆ ? ಅಷ್ಟು ವೈವಿಧ್ಯಮಯವಾಗಿದೆ ಸೈಕಲ್ ಲೋಕ.

ಸಾಮಾನ್ಯ ಸೈಕಲ್ ಕಡಿಮೆ ಮೊತ್ತಕ್ಕೆ ಸಿಗುತ್ತದೆ, ಕೆಟ್ಟ ರಸ್ತೆಗಳು, ಬೆಟ್ಟ ಗುಡ್ಡ ಹಾದಿಗಳಲ್ಲಿ ಸುಲಭವಾಗಿ ಸಾಗಬಲ್ಲ ಮೌಂಟೆನ್​ಟೆರೇನ್ ಬೈಕ್ ಅಥವಾ ಎಂಟಿಬಿ, ಸಪಾಟು ರಸ್ತೆಗಳಲ್ಲಿ ಜುಯ್ಯನೆ ಸಾಗಿಬಿಡಬಲ್ಲ, ರೇಸಿಂಗ್ ಆಸಕ್ತರ ಅಚ್ಚುಮೆಚ್ಚಿನ ಬಾಗಿದ ಹ್ಯಾಂಡಲ್​ನ ರೋಡ್​ಬೈಕ್, ಇವೆರಡರ ಮಧ್ಯೆ ತುಸು ವೇಗವೂ ತುಸು ಕಚ್ಚಾ ರಸ್ತೆಗಳಿಗೂ ಅನುಕೂಲವಾಗಬಲ್ಲ ಹೈಬ್ರಿಡ್ ಬೈಕ್​ಗಳು ಇವು ನಾಲ್ಕು ವಿಧವಾಗಿ ಸೈಕಲ್​ಗಳನ್ನು ವಿಂಗಡಿಸಬಹುದು.

ಇಷ್ಟಕ್ಕೇ ನಿಲ್ಲುವುದಿಲ್ಲ, ಕಳೆದ ಒಂದು ದಶಕದಲ್ಲಿ ಸವಾರರ ಇಷ್ಟಕ್ಕೆ ಬೇಕಾದಂತಹ ಸೈಕಲ್​ಗಳು ಬಂದಿವೆ. ಉದಾಹರಣೆಗೆ ತಿಂಗಳುಗಟ್ಟಲೆ ಸೈಕಲ್ ಮೇಲೆ ಲೋಕ ಸಂಚಾರ ಕೈಗೊಳ್ಳುವವರಿಗೆ ಬೇಕಾದ, ರ್ಯಾಕ್, ಬ್ಯಾಗ್ ಇತ್ಯಾದಿ ಜೋಡಿಸಬಲ್ಲ ಟೂರಿಂಗ್ ಬೈಸಿಕಲ್ಸ್, ಗುಡ್ಡದ ತುದಿಗೆ ಹೆಗಲಲ್ಲಿ ಇರಿಸಿಕೊಂಡು ಹೋಗಿ, ಅಲ್ಲಿಂದ ಕೆಳಗೆ ಇಳಿಯುತ್ತಾ ಬರಲು ಬೇಕಾದ ‘ಡೌನ್​ಹಿಲ್ ಎಂಟಿಬಿ’, ಕಚ್ಚಾ ಮಣ್ಣು ರಸ್ತೆಗಳಲ್ಲಿ ರೇಸಿಂಗ್ ಮಾಡುವವರಿಗೆ ‘ಸೈಕ್ಲೋಕ್ರಾಸ್’, ತುಸು ಕೆಟ್ಟರಸ್ತೆಗಳಲ್ಲೂ ಆರಾಮದಾಯಕ ಸವಾರಿ ನೀಡಬಲ್ಲ ‘ಗ್ರಾವೆಲ್ ಬೈಕ್ಸ್’ ಹೀಗೆ…ಆಸಕ್ತಿಗೆ ತಕ್ಕಂತೆ ಸೈಕಲ್​ಗಳೂ ಇವೆ.

ಕ್ಲಬ್ ಸೇರಿಕೊಳ್ಳಿ

ಸೈಕ್ಲಿಂಗ್​ನ್ನು ಗಂಭೀರವಾಗಿ ಪರಿಗಣಿಸುವಿರಾದರೆ ಸ್ಥಳೀಯವಾಗಿ ಇರುವ ನಿಮ್ಮ ಭಾಗದ ಸೈಕ್ಲಿಂಗ್ ಕ್ಲಬ್​ಗಳನ್ನೋ, ಗ್ರೂಪ್​ಗಳನ್ನೋ ಸೇರಿಕೊಳ್ಳಬಹುದು. ಬೆಂಗಳೂರಿನಲ್ಲಿ ಬೆಂಗಳೂರ್ ಬೈಕರ್ಸ್, ಬಮ್್ಸ ಆನ್ ಸ್ಯಾಡಲ್, ಬೆಂಗಳೂರು ಸೈಕ್ಲಿಂಗ್ ಕ್ಲಬ್, ಬೆಂಗಳೂರು ರ್ಯಾಂಡನೀರ್ಸ್ ಹೀಗೆ ಅನೇಕ ಗ್ರೂಪ್​ಗಳಿವೆ. ಮಂಗಳೂರಿನಲ್ಲಿ ಮಂಗಳೂರು ಬೈಸಿಕಲ್ ಕ್ಲಬ್, ಮಂಗಳೂರು ಸೈಕ್ಲಿಂಗ್ ಕ್ಲಬ್, ವೀ ಆರ್ ಸೈಕ್ಲಿಂಗ್ ಎಂಬ ಕ್ಲಬ್​ಗಳಿವೆ, ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಸೈಕ್ಲಿಂಗ್ ಕ್ಲಬ್, ಬೆಳಗಾವಿಯಲ್ಲಿ ಬೆಳಗಾಂ ಸೈಕ್ಲಿಂಗ್​ಕ್ಲಬ್, ಮೈಸೂರಿನಲ್ಲಿ ಮೈಸೂರು ಸೈಕ್ಲಿಂಗ್ ಕ್ಲಬ್ ಇದೆ.

ಇಂತಹ ಕ್ಲಬ್​ಗಳಲ್ಲಿರುವ ಹಿರಿಯ ಸದಸ್ಯರಿಂದ ಸಾಕಷ್ಟು ಮಾರ್ಗದರ್ಶನ ಸಿಗುತ್ತದೆ. ನೀವು ಹವ್ಯಾಸಿಗಳಾಗಿರಿ, ಅಥವಾ ಕ್ರೀಡಾಪಟುವಾಗಿ ಸೈಕ್ಲಿಂಗ್​ನಲ್ಲಿ ಮುಂದುವರಿಯುವಿರಾದರೂ ಅಲ್ಲಿ ಅದಕ್ಕೆ ಪ್ರೋತ್ಸಾಹ ಸಿಗುತ್ತದೆ, ಕಾರ್ಯಾಗಾರಗಳು, ಬೇಕಾದ ಸಲಹೆಗಳು ಸಿಗುತ್ತವೆ. ಒಬ್ಬರೇ ಹೋಗುವಾಗ ತಪ್ಪುಗಳಾಗುವ ಸಾಧ್ಯತೆ ಹೆಚ್ಚು.

ಶುರು ಮಾಡೋದು ಹೇಗೆ?

ಅನೇಕರಿಗೆ ಸೈಕ್ಲಿಂಗ್ ಶುರು ಮಾಡುವುದು ದೊಡ್ಡ ಸವಾಲು, ದುಬಾರಿ ಸೈಕಲ್ ಕೊಂಡಿರುತ್ತಾರೆ, ಆದರೆ ಮೊದಲ ದಿನ 5-6 ಕಿ.ಮೀ ಸಾಗುವಾಗಲೇ ಉಸ್ಸಪ್ಪಾ.. ಮತ್ತೆ ಎರಡು ದಿನದಲ್ಲಿ ಕಾಲುಗಳಲ್ಲಿನ ಪೇಶಿಗಳು ನೋಯತೊಡಗಿರುತ್ತವೆ. 15 ದಿನವಾದಾಗ ಅರ್ಧದಾರಿಯಲ್ಲೆಲ್ಲೋ ಸೈಕಲ್ ಟೈರ್ ಪಂಚರ್, ಮತ್ತೆ ತಳ್ಳಿಕೊಂಡೋ, ಆಟೋದಲ್ಲಿ ಏರಿಸಿಕೊಂಡೋ ಬರುವ ತ್ರಾಸ. ಇದೆಲ್ಲ ನೋಡಿದಾಗ ಯಾವುದೂ ಬೇಡ ಎಂದು ಸೈಕಲ್ ಮನೆಮೂಲೆಗೆ ಬೀಳುತ್ತದೆ.

ಇದು ಸಾಮಾನ್ಯ. ಸೈಕಲ್ ಕೊಳ್ಳುವಾಗಲೇ ಯಾಕೆ ಬೇಕು ಎನ್ನುವುದು ಮನಸ್ಸಿನಲ್ಲಿ ಇರಬೇಕು. ಫಿಟ್​ನೆಸ್ ಆದರೆ ಪ್ರತಿ ದಿನ 20-30 ಕಿ.ಮೀ ಸೈಕ್ಲಿಂಗ್ ಮಾಡಿದರೆ ಸಾಕಾಗುತ್ತದೆ. ಏರು ತಗ್ಗು ದಾರಿ ಹೆಚ್ಚಾದಷ್ಟು ವ್ಯಾಯಾಮವೂ ಹೆಚ್ಚು. ಪ್ರಾರಂಭದಲ್ಲಿ 5-10 ಕಿ.ಮೀಗೆ ಸುಸ್ತಾಗುವುದು ಸಾಮಾನ್ಯ, ಕ್ರಮೇಣ ದೇಹ ಇದಕ್ಕೆ ಒಗ್ಗಿಕೊಳ್ಳುತ್ತದೆ. ಪೃಷ್ಟ ಭಾಗಕ್ಕೆ ಸೀಟ್ ಒತ್ತಿ ಆಗುವ ನೋವು ಕೂಡ ಕೆಲವು ತಿಂಗಳುಗಳಲ್ಲಿ ನಿವಾರಣೆಯಾಗುತ್ತದೆ. ಪ್ರಾರಂಭದಲ್ಲೇ ಹಿಂಜರಿದರೆ ನಿಮ್ಮ ಯೋಜನೆ ಟುಸ್ ಆದಂತೆಯೇ.

ನನಗೆ ಮೊದಲು ದೈನಂದಿನ ಚಟುವಟಿಕೆ ವೇಳೆ ಆಯಾಸ ಆಗುತ್ತಿತ್ತು, ಆಗಾಗ ತಲೆನೋವು ಬರುತ್ತಿತ್ತು. ದೇಹದಲ್ಲಿ ಚೈತನ್ಯ ಇರುತ್ತಿರಲಿಲ್ಲ, ಆದರೆ ಸೈಕ್ಲಿಂಗ್ ಶುರು ಮಾಡಿದ ಬಳಿಕ ತಲೆನೋವಿಲ್ಲ, ದೇಹದ ನಿರೋಧಕ ಶಕ್ತಿ ಹೆಚ್ಚಿದೆ, ಫಿಟ್ ಆಗಿರಲು ಸೈಕ್ಲಿಂಗ್ ಅತ್ಯುತ್ತಮ.

| ಗುರುರಾಜ್ ಪಾಟೀಲ್, ಬಿಎಎಸ್​ಎಫ್ ಕಂಪನಿ ಉದ್ಯೋಗಿ

 

ನನಗೆ ಮೊದಲು ಬೆನ್ನಿನ ಕೆಳಭಾಗದಲ್ಲಿ ನೋವಿತ್ತು, ಆದರೆ ಸೈಕ್ಲಿಂಗ್ ಶುರುಮಾಡಿದ ಬಳಿಕ ಕಡಿಮೆಯಾಗಿದೆ, ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ 4-5 ತಿಂಗಳು ಸೈಕ್ಲಿಂಗ್ ಬಿಟ್ಟಾಗ ಬೆನ್ನುನೋವು ಬರುವುದಿದೆ. ನನ್ನ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾಗಿರುವುದು ಗಮನಕ್ಕೆ ಬರುತ್ತದೆ, ನಿದ್ರೆ ಹೆಚ್ಚಾಗಿದೆ.

| ಧೀರಜ್ ಹೆಜಮಾಡಿ, ಇನ್ಪೋಸಿಸ್ ಉದ್ಯೋಗಿ

ನಗರದಿಂದ ಹೊರಗೆ ಹೋಗಿ ಏರಿಳಿತದ ಹಾದಿಯಲ್ಲಿ ಸೈಕ್ಲಿಂಗ್ ಮಾಡುವುದು ಆರೋಗ್ಯಕ್ಕೆ ಸಹಕಾರಿ, ಇದರಿಂದ ಮನಸ್ಸಿಗೆ ಖುಷಿ ಅಷ್ಟೇ ಅಲ್ಲ ದೇಹದ ಕ್ಯಾಲರಿ ಕೂಡ ಕರಗುತ್ತದೆ, ಕೊಬ್ಬು ಕರಗಿದರೆ ಆರೋಗ್ಯಕ್ಕೆ ಸಾಕಷ್ಟು ಉತ್ತೇಜನ ನೀಡಿದಂತೆ. ಹಾಗಾಗಿ ಈಗೀಗ ಕ್ಲಬ್​ಗಳಿಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ.

| ಗಣೇಶ್ ನಾಯಕ್, ಮಂಗಳೂರು ಬೈಸಿಕಲ್ ಕ್ಲಬ್ ಕಾರ್ಯದರ್ಶಿ

 

ಫಿಟ್ ಆಗಿರುವುದಕ್ಕೆ ನನಗೆ ಸೈಕ್ಲಿಂಗ್ ಬಹಳ ಸಹಾಯವಾಗುತ್ತಿದೆ. ದೈಹಿಕವಷ್ಟೇ ಅಲ್ಲ, ಮಾನಸಿಕವಾಗಿಯೂ ಉಲ್ಲಾಸದಿಂದ ಇರುತ್ತೇನೆ. ದಿನವಿಡೀ ಒತ್ತಡ ರಹಿತವಾಗಿರುತ್ತದೆ.

| ಮಧುರಾ ಜೈನ್ ಪ್ರಾಧ್ಯಾಪಕಿ