ಹುಬ್ಬಳ್ಳಿಯಲ್ಲಿ ‘ಸೈಕ್ಲೋತ್ಸವ’ ಜ. 26ಕ್ಕೆ

ಹುಬ್ಬಳ್ಳಿ: ಗಿನ್ನೆಸ್ ವಿಶ್ವದಾಖಲೆ ನಿರ್ವಣದ ಅಂಗವಾಗಿ ಜ. 26ರ ಗಣರಾಜ್ಯೋತ್ಸವ ದಿನದಂದು ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ನಗರದಲ್ಲಿ ‘ಸೈಕ್ಲೋತ್ಸವ’ ಆಯೋಜಿಸಲಾಗಿದೆ.

1,500ಕ್ಕೂ ಹೆಚ್ಚು ಸೈಕ್ಲಿಸ್ಟ್​ಗಳು ಒಂದೇ ಸಾಲಿನಲ್ಲಿ 8 ಕಿಮೀಗಳವರೆಗೆ ಸೈಕಲ್ ಓಡಿಸಲಿದ್ದಾರೆ. ಆ ಮೂಲಕ 2016ರಲ್ಲಿ ಬಾಂಗ್ಲಾದಲ್ಲಿ 1,186 ಸೈಕ್ಲಿಸ್ಟ್​ಗಳು 3.2 ಕಿಮೀ ಸೈಕಲ್ ಓಡಿಸುವ ಮೂಲಕ ನಿರ್ವಿುಸಿದ್ದ ದಾಖಲೆ ಮುರಿಯುವ ಪ್ರಯತ್ನ ಮಾಡಲಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಹುಬ್ಬಳ್ಳಿ ಬೈಸಿಕಲ್ ಕ್ಲಬ್​ನ ಕಾರ್ಯದರ್ಶಿ ಆನಂದ ಬೇಡ್, ಸೈಕ್ಲೋತ್ಸವದಲ್ಲಿ ಪಾಲ್ಗೊಳ್ಳುವವರಿಗಾಗಿ ಆನ್​ಲೈನ್ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ದೇಶದಾದ್ಯಂತದ ಸೈಕಲ್ ಸವಾರಿ ಆಸಕ್ತರು ಹಾಗೂ ವಿದೇಶದವರೂ ತಮ್ಮ ಹೆಸರು ನೋಂದಣಿ ಮಾಡುವ ಮೂಲಕ ಸೈಕ್ಲೋತ್ಸವದಲ್ಲಿ ಪಾಲ್ಗೊಳ್ಳಬಹುದು ಎಂದರು.

ನಿರೀಕ್ಷೆಗಿಂತ ಹೆಚ್ಚಿನ ಸೈಕ್ಲಿಸ್ಟ್​ಗಳು ಪಾಲ್ಗೊಳ್ಳುವ ವಿಶ್ವಾಸ ಇದೆ. ಸೈಕ್ಲಿಸ್ಟ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಲ್ಲಿ ಭವಿಷ್ಯದಲ್ಲಿ ಈ ದಾಖಲೆ ಸರಿಗಟ್ಟುವುದು ಅಥವಾ ಹೊಸ ದಾಖಲೆ ನಿರ್ವಿುಸುವುದು ಕಷ್ಟಕರ ಎಂದು ತಿಳಿಸಿದರು.

ಹುಬ್ಬಳ್ಳಿ ಐಟಿ ಪಾರ್ಕ್​ನ ಟೆಕ್ ಸ್ಟೋರ್, ಕೊಪ್ಪಿಕರ ರಸ್ತೆಯ ದೀಪಕ ಸೈಕಲ್ಸ್, ಗೋಕುಲ ರಸ್ತೆಯ ಅಮೇಜಿಂಗ್ ಬೈಕ್ಸ್, ವಿದ್ಯಾನಗರದ ಬಾರ್ನ್ ಟು ಪೆಡಲ್ ಹಾಗೂ ಸೆವೆನ್ ಬೀನ್ಸ್​ನಲ್ಲಿಯೂ ಹೆಸರು ನೋಂದಾಯಿಸಬಹುದು.

ಸೈಕ್ಲೋತ್ಸವಕ್ಕೂ ಮುಂಚೆ 12 ವಿವಿಧ ಪರೀಕ್ಷೆಗಳನ್ನು ಏರ್ಪಡಿಸಲಾಗುವುದು. ಅದರಲ್ಲಿ ಯಶಸ್ವಿಯಾದರೆ ಮಾತ್ರ ಸೈಕ್ಲೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು. ಈ ಪ್ರಕ್ರಿಯೆ ಗಿನ್ನೆಸ್ ದಾಖಲೆಗಾಗಿ ನಡೆಯುತ್ತಿರುವುದರಿಂದ ಪೂರ್ವ ತರಬೇತಿಯನ್ನೂ ನೀಡಲಾಗುವುದು.

ಈ ರೀತಿಯ ಪ್ರಯತ್ನ ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದರಿಂದ ಇಡೀ ದೇಶ ಗಣರಾಜ್ಯೋತ್ಸವದಂದು ಹುಬ್ಬಳ್ಳಿಯತ್ತ ಗಮನ ಹರಿಸಲಿದೆ. ಗಿನ್ನೆಸ್ ದಾಖಲೆಗೆ ಇಂಗ್ಲೆಂಡ್​ನಿಂದ ಮೂವರು ತೀರ್ಪಗಾರರಾಗಿ ಆಗಮಿಸಲಿದ್ದಾರೆ. ಡಿ. 31ರವರೆಗೂ ಆನ್​ಲೈನ್ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.

ಪ್ರಾಯೋಜಕತ್ವ: ವಿಆರ್​ಎಲ್ ಲಾಜಿಸ್ಟಿಕ್ಸ್ ಲಿ., ದಿಗ್ವಿಜಯ ವಾಹಿನಿ, ಪ್ರೖೆಡ್ ಗ್ರುಪ್, ಸ್ವರ್ಣಾ ಗ್ರುಪ್ ಆಫ್ ಕಂಪನೀಸ್, ದೀಪಕ ಸೈಕಲ್ ಸ್ಟೋರ್ಸ್, ಶ್ರೀ ಕೃಷ್ಣ ಹಾಲು ಮತ್ತು ಹಾಲಿನ ಉತ್ಪಾದನೆಗಳು ಹಾಗೂ ಹೋಟೆಲ್ ಸ್ವರ್ಣಾ ಪ್ಯಾರಾಡೈಸ್ ಪ್ರಾಯೋಜಕತ್ವದೊಂದಿಗೆ ಸೈಕ್ಲಿಂಗ್ ಹಬ್ಬ ‘ಸೈಕ್ಲೊತ್ಸವ’ ಆಯೋಜಿಸಲಾಗಿದೆ.

ಸೈಕ್ಲಿಸ್ಟ್​ಗಳ ಮಹತ್ವ ಸಾರುವ ಕಿರುಚಿತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ ದೇಶಪಾಂಡೆ, ಕ್ಲಬ್ ಸಲಹೆಗಾರ ಡಾ. ವಿ.ಎಸ್.ವಿ. ಪ್ರಸಾದ, ಕೌಸ್ತುಭ ಸೌಂಶೀಕರ ಮತ್ತಿತರರು ಉಪಸ್ಥಿತರಿದ್ದರು.

  • ಸೈಕ್ಲೋತ್ಸವದಲ್ಲಿ ಭಾಗವಹಿಸಲಿಚ್ಛಿಸುವವರು 9108507179 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ ನೋಂದಣಿಗೆ ಬೇಕಾಗುವ ಸಹಾಯ ದೊರೆಯುತ್ತದೆ.
  • 500 ರೂ. ನೋಂದಣಿ ಶುಲ್ಕವಿದ್ದು, ಸೈಕ್ಲಿಸ್ಟ್​ಗಳಿಗೆ ಜರ್ಸಿ, ಪ್ರಮಾಣ ಪತ್ರ, ಪದಕ ನೀಡಲಾಗುವುದು.
  • ಆನ್​ಲೈನ್​ನಲ್ಲಿ ಹೆಸರು ನೋಂದಾಯಿಸಿ ಶುಲ್ಕ ಭರಿಸಲು www.hbcriders.com ಗೆ ಸಂರ್ಪಸಬಹುದು.