More

  ಹಾಸನ ಡಿವೈಎಸ್‌ಪಿ ಎರಡು ಬ್ಯಾಂಕ್ ಖಾತೆಗಳಿಂದ 15 ಲಕ್ಷ ರೂ. ಎಗರಿಸಿದ ಖದೀಮರು!

  ಹಾಸನ: ಹಾಸನ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪಿ.ಕೆ. ಮುರಳೀಧರ್ ಅವರ ಎರಡು ಬ್ಯಾಂಕ್ ಖಾತೆಗಳಿಂದ ಐನಾತಿ ಖದೀಮರು 15.98 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.

  ಮುರಳೀಧರ್ ಅವರು ಮೂಲತಃ ಕೊಡಗು ಜಿಲ್ಲೆಯವರಾಗಿದ್ದು, ಪ್ರಸ್ತುತ ಹಾಸನ ಉಪ ವಿಭಾಗದಲ್ಲಿ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಡಿಕೇರಿ ಹಾಗೂ ಭಾಗಮಂಡಲದ ಕೆನರಾ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಮೇ 20ರ ಸೋಮವಾರ ಮಧ್ಯಾಹ್ನ 1.30ರ ಸಮಯದಲ್ಲಿ ಮುರಳೀಧರ್ ಅವರ ಫೋನ್‌ಗೆ ಹಣ ವರ್ಗಾವಣೆಯಾಗಿರುವ ಮೆಸೇಜ್‌ಗಳು ಬಂದಿವೆ.

  ಪೋನ್‌ಗೆ ಬಂದ ಮೆಸೇಜ್‌ಗಳನ್ನು ನೋಡಲಾಗಿ ಎರಡು ಬ್ಯಾಂಕ್ ಖಾತೆಗಳಿಂದ ಹಣ ಅವರ ಗಮನಕ್ಕೆ ಬಾರದಂತೆ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಮಡಿಕೇರಿ ಮುಖ್ಯಶಾಖೆ ಖಾತೆಯಿಂದ ಬೆಳಗ್ಗೆ 10.29 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಒಟ್ಟು 25 ವರ್ಗಾವಣೆಗಳ ಮೂಲಕ ಒಟ್ಟು 12,10,711 ಹಣ ಬೇರೆಯವರ ಖಾತೆಗೆ ವರ್ಗಾವಣೆಯಾಗಿದೆ.

  ಹಾಗೆಯೇ, ಭಾಗಮಂಡಲ ಶಾಖೆ ಖಾತೆಯಿಂದ ಬೆಳಿಗ್ಗೆ 10.28ರಿಂದ ಮಧ್ಯಾಹ್ನ 12.56 ಗಂಟೆಯವರೆಗೆ 10 ವರ್ಗಾವಣೆಗಳ ಮೂಲಕ ಒಟ್ಟು 3,88,050 ರೂಪಾಯಿ ವರ್ಗಾವಣೆಯಾಗಿದೆ. ಕೆನರಾ ಬ್ಯಾಂಕ್ ಎರಡು ಖಾತೆಗಳಿಂದ ಒಟ್ಟು 15,98,761 ಹಣ ಬೇರೆ ಬೇರೆ ಅಪರಿಚಿತ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ.

  ವಂಚನೆ ಸಂಬಂಧ ಪಿ.ಕೆ. ಮುರಳೀಧರ್ ಅವರು ಸೋಮವಾರ ಹಾಸನದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆಗೊಂಡಿರುವ ಬ್ಯಾಂಕ್ ಖಾತೆಗಳನ್ನು ಹಾಗೂ ಖಾತೆದಾರರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts