ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ #JusticeForPriyankaReddy ಎಂಬ ಹ್ಯಾಷ್ ಟ್ಯಾಗ್ ಮೂಲಕ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಆದರೆ, ವಿವಾದಿತ ನಟಿ ರಾಖಿ ಸಾವಂತ್ ಮಾತ್ರ ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದು, ಆರೋಪಿಗಳ ಜನನೇಂದ್ರಿಯಗಳನ್ನು ಕತ್ತರಿಸಿ ಶಿಕ್ಷಿಸುವಂತೆ ಮನವಿ ಮಾಡಿದ್ದಾರೆ.
ಘಟನೆ ಬಗ್ಗೆ ಆಕ್ರೋಶ ಹೊರಹಾಕಿ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಸಾವಂತ್, ಭಾರತದಂತಹ ರಾಷ್ಟ್ರದಲ್ಲಿ ಜೀವಿಸಲು ಮಹಿಳೆಯರು ತಮ್ಮಷ್ಟಕ್ಕೆ ತಾವು ರಕ್ಷಣಾ ತಂತ್ರಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು. ಯಾರೊಬ್ಬರು ಮಹಿಳೆಯರ ಸಹಾಯಕ್ಕೆ ಧಾವಿಸುವುದಿಲ್ಲ ಎಂಬುದನ್ನು ನಾವೆಲ್ಲರೂ ತಿಳಿದಿದ್ದೇವೆ ಎಂದಿದ್ದಾರೆ.
ಸಾವಂತ್ ಇದೇ ವೇಳೆ ಮಹಿಳೆಯರಿಗೆ ಸಲಹೆಯೊಂದನ್ನು ನೀಡಿ, ಹೆದ್ದಾರಿಯಲ್ಲಿ ಪ್ರಯಾಣ ಬೆಳೆಸುವಾಗ ತಮ್ಮ ಸ್ಕೂಟರ್ನಲ್ಲಿ ಸಾಕಷ್ಟು ಪೆಟ್ರೋಲ್ ಇದೆಯಾ ಎಂಬುದನು ನೋಡಿಕೊಳ್ಳಿ, ಯಾವುದೇ ಕಾರಣಕ್ಕೂ ಹೆದ್ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸಬೇಡಿ ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿಗೆ ನಾಲ್ವರು ಆರೋಪಿಗಳಿಗೆ ಕಠಿಣವಾದ ಶಿಕ್ಷೆ ನೀಡುವಂತೆ ಸಾವಂತ್ ಸವಾಲು ಹಾಕಿದ್ದಾರೆ. ಅತ್ಯಾಚಾರ ಆರೋಪಿಗಳಿಗೆ ತಾಲಿಬಾನ್ನಲ್ಲಿ ನೀಡುವ ಶಿಕ್ಷೆಯನ್ನೇ ಈ ನಾಲ್ವರು ಆರೋಪಿಗಳಿಗೆ ನೀಡಿ ಎನ್ನುವ ಮೂಲಕ ಜನನಾಂಗಗಳನ್ನು ಕತ್ತರಿಸಲು ಸಾವಂತ್ ಆಗ್ರಹಿಸಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ಪ್ರಧಾನಿ ಮೋದಿ ಕುರಿತಾಗಿ ಭಾರತದಲ್ಲಿನ ಮಹಿಳೆಯ ರಕ್ಷಣೆಯ ಜವಬ್ದಾರಿ ಮೋದಿಯವರ ಮೇಲಿದೆ. ಈ ವಿಚಾರದಲ್ಲಿ ಅವರು ಆರೋಪಿಗಳೊಂದಿಗೆ ತುಂಬಾ ಕಟುವಾಗಿ ನಡೆದುಕೊಳ್ಳಬೇಕು. ಆರೋಪಿಗಳನ್ನು ನೇಣಿಗೆ ಹಾಕುವುದಕ್ಕಿಂತ ಅವರ ಮೇಲೆ ಆಸಿಡ್ ಸುರಿಯಬೇಕೆಂದು ಸಾವಂತ್ ಒತ್ತಾಯಿಸಿದ್ದಾರೆ. (ಏಜೆನ್ಸೀಸ್)