ಭೃಂಗರಾಜ, ಕರಿಬೇವಿನ ಕಷಾಯ

ಕೂದಲಿನ ಆರೋಗ್ಯ ರಕ್ಷಣೆಗೆ ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಆಹಾರೌಷಧಿ-ಕಷಾಯದ ಬಗೆಗೆ ತಿಳಿದುಕೊಳ್ಳೋಣ. ಬೆಟ್ಟದ ನೆಲ್ಲಿಕಾಯಿ, ಕರಿಬೇವಿನ ಎಲೆಗಳು, ನುಗ್ಗೆಸೊಪ್ಪು, ಜೇನುತುಪ್ಪವನ್ನು ಬಳಸಿ ತಯಾರಿಸಬಹುದಾದ ಸುಲಭ, ಆದರೆ ಪರಿಣಾಮಕಾರಿ ಕಷಾಯ ಇದು. ನೀರನ್ನು ಬಿಸಿಗೆ ಇರಿಸಿಕೊಂಡು ಅದಕ್ಕೆ ನೆಲ್ಲಿಕಾಯಿಯನ್ನು ಚೂರು ಮಾಡಿ ಹಾಕಬೇಕು. ನಂತರ 7ರಿಂದ 8 ಕರಿಬೇವಿನ ಎಲೆಗಳು, ನುಗ್ಗೆಸೊಪ್ಪು ಹಾಕಿ ಮಂದ ಉರಿಯಲ್ಲಿ ಕುದಿಸಿ ಕಷಾಯ ಮಾಡಬೇಕು. ನಂತರ ಸೋಸಿ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಬೇಕು. ಪ್ರತಿನಿತ್ಯ ಈ ಕಷಾಯ ಕುಡಿಯುವುದರಿಂದ ಕೂದಲಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ನುಗ್ಗೆಸೊಪ್ಪು ಪೋಷಕಾಂಶಗಳ ಆಗರ. ಬೆಟ್ಟದ ನೆಲ್ಲಿಕಾಯಿ ಹಾಗೂ ಕರಿಬೇವಿನ ಎಲೆಗಳು ಕೂದಲಿನ ಪೋಷಣೆಗೆ ಸಹಾಯ ಮಾಡುತ್ತವೆ. ಹಸಿ ಬೆಟ್ಟದ ನೆಲ್ಲಿಕಾಯಿ ಸಿಗದೆ ಇರುವ ಸಮಯದಲ್ಲಿ ಬೆಟ್ಟದ ನೆಲ್ಲಿ ಚೆಟ್ಟನ್ನು (ಉಪ್ಪು ರಹಿತ) ಬಳಸಬಹುದು.

ಭೃಂಗರಾಜಕ್ಕೆ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಮೇರುಸ್ಥಾನ. ಅನೇಕ ಸಮಸ್ಯೆಗಳ ನಿರ್ವಹಣೆಯಲ್ಲಿ ಪರಿಣಾಮಕಾರಿ ಪರಿಹಾರಗಳನ್ನು ನೀಡಬಲ್ಲುದು. ಮೆಂತ್ಯ ಪುಡಿ ಹಾಗೂ ಭೃಂಗರಾಜ ಪುಡಿಯನ್ನು ಸೇರಿಸಿ ಸರಿಯಾದ ರೀತಿಯಲ್ಲಿ ಕೂದಲಿನ ಆರೋಗ್ಯಕ್ಕೆ ಬಳಕೆ ಮಾಡಿದಲ್ಲಿ ಅದು ಕೂದಲಿನ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಹೆಚ್ಚು ಸಹಾಯಕಾರಿಯಾಗಬಲ್ಲದು. ಮೆಂತ್ಯಪುಡಿ ಹಾಗೂ ಭೃಂಗರಾಜಪುಡಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೀರನ್ನುಪಯೋಗಿಸಿ ಕಲಸಿಕೊಳ್ಳಬೇಕು. ಇದನ್ನು ತಲೆಗೆ ಹಚ್ಚಿ ಪ್ಯಾಕ್ ಮಾಡಿಕೊಳ್ಳಬೇಕು. ಇದರಿಂದ ಕೂದಲಿನ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹೊಟ್ಟಿನ ಸಮಸ್ಯೆ, ಬಿಳಿ ಕೂದಲು, ಹೆಚ್ಚು ಕೂದಲುದುರುವುದನ್ನು ನಿಯಂತ್ರಣಕ್ಕೆ ತರಲು ಇದು ಸಹಕಾರಿ.