ವಿಜಯಪುರ: ನಗರದ ಆರಾಧ್ಯ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರೆಯಲ್ಲಿ ಅಪಾಯಕಾರಿ ಹಾಗೂ ಅನಧಿಕೃತ ಮನರಂಜನಾ ಆಟಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಭೀಮ್ ಸರ್ಕಾರ ಪದಾಧಿಕಾರಿಗಳು ಸೋಮವಾರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಾತ್ರಾ ಮಹೋತ್ಸವದಲ್ಲಿ ಮನರಂಜನೆಗೆ ಕೆಲ ಬೃಹತ್ ಪ್ರಮಾಣದ ಜೋಕಾಲಿ ತೊಟ್ಟಿಲು, ಚಿರಕಿಗಾಣ ಹಾಕಲಾಗುತ್ತದೆ. ಅವುಗಳಿಗೆ ಜಿಲ್ಲಾಡಳಿತದಿಂದ ಪರವಾನಗಿ ಪಡೆಯಬೇಕು. ಆದರೆ, ಅದ್ಯಾವುದೂ ಪಾಲಿಸಲ್ಲ. ನಮ್ಮ ಸಂಘಟನೆಯಿಂದ ಸಂಬಂಧಿತ ಇಲಾಖೆಗಳಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಅವರಿಂದ ಯಾವುದೇ ಉತ್ತರ ದೊರತಿಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಯಾಚಾರಣೆ ನಡೆಸಿ ಪರವಾನಗಿ ಇಲ್ಲದ ಮನರಂಜನಾ ಆಟಗಳನ್ನು ನಿಯಂತ್ರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಚಲವಾದಿ, ರುದ್ರೇಶ ಚಲವಾದಿ, ಅರುಣ ನಾಯ್ಕೋಡಿ, ರಾಜಾಸಾಬ ನದಾಫ, ಎಂ.ಆರ್. ದೊಡಮನಿ, ಶಿವುಕುಮಾರ ಪಟ್ಟಣಶೆಟ್ಟಿ, ಶಿವಾನಂದ ಮೂಡಲಗಿ, ಸುರೇಶ ಸಿಂಗೆ, ಶ್ರೀಧರ ಇಮ್ಮನದ, ಮಂಜುನಾಥ ಬಬಲಾದಿ, ಸುದೀಪ ಚಲವಾದಿ, ಸೋಮು ಶಹಾಪೂರ ಮತ್ತಿತರರಿದ್ದರು.