ಗಜೇಂದ್ರಗಡ: ಕಲಾವಿದರ ಬದುಕಿದರೆ ಕಲೆ ಉಳಿಯುತ್ತದೆ, ಕಲೆ ಉಳಿದರೆ ಈ ನಾಡಿನ ಸಂಸ್ಕೃತಿ ಬೆಳೆಯುತ್ತದೆ ಎಂದು ಗಜೇಂದ್ರಗಡ ಪಿಎಸ್ಐ ಸೋಮನಗೌಡ ಗೌಡ್ರ ಹೇಳಿದರು.
ಪಟ್ಟಣದ ಜಿ.ಕೆ. ಬಂಡಿ ಗಾರ್ಡನ್ನಲ್ಲಿ ಭಾನುವಾರ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ, ರಂಗಭೂಮಿ ಹಿರಿಯ ಕಲಾವಿದೆ ಎಚ್.ಬಿ. ಸರೋಜಮ್ಮ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯ ಶಿವ ಕೃಪಾ ಕಲಾ ಸಂಘದ ಕಲಾವಿದರ ‘ಸಂಪೂರ್ಣ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ದಶಕಗಳ ಹಿಂದೆ ಗ್ರಾಮಾಂತರ ಪ್ರದೇಶದಲ್ಲಿ ನಾಟಕ ಪ್ರದರ್ಶನಗಳು ನಡೆಯುತ್ತಿದ್ದವು. ಪ್ರದರ್ಶನಗಳ ಹಿಂದೆ ಸಮಾಜದ ಅಂಕುಡೊಂಕು ತಿದ್ದುವ ಉದ್ದೇಶ ಇರುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಆ ಕೆಲಸವನ್ನು ಸಾಮಾಜಿಕ ಕಥಾಹಂದರ ಒಳಗೊಂಡ ನಾಟಕಗಳು ನಿಭಾಯಿಸಿದವು. ಆದರೆ, ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟ ಜಾತಿ ಸೂಚಕ ಶೀರ್ಷಿಕೆಯನ್ನು ಒಳಗೊಂಡ ನಾಟಕಗಳು ಬರುತ್ತಿವೆ. ನಾಟಕಗಳು ಒಂದು ಜಾತಿಗೆ ಸೀಮಿತಗೊಂಡರೆ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.
ಗಜೇಂದ್ರಗಡ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ನಾಟಕಗಳು ಸಮಾಜದಲ್ಲಿನ ವಿದ್ಯಮಾನಗಳನ್ನು ಪ್ರತಿಬಿಂಬಿಸುತ್ತವೆ. ಅವುಗಳ ಮೂಲಕ ಕಲಿಯುವುದು ಬಹಳಷ್ಟಿದೆ. ನಾಟಕ ನೋಡುವುದು ಆರೋಗ್ಯಕರ ಬೆಳವಣಿಗೆ. ನಾಟಕವೇ ಸಮಾಜದ ತಪ್ಪು ತಿದ್ದುವ ಮಹಾನ್ ಸಾಧನಗಳಾಗಿವೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತೆ, ರಂಗಭೂಮಿ ಹಿರಿಯ ಕಲಾವಿದೆ ಎಚ್.ಬಿ. ಸರೋಜಮ್ಮ ಮಾತನಾಡಿ, ರಂಗಭೂಮಿ ಅಳಿವು ಉಳಿವಿನಂಚಿನಲ್ಲಿದೆ. ಉತ್ತರಕರ್ನಾಟಕದಲ್ಲಿ ಮಾತ್ರ ರಂಗಭೂಮಿ ತನ್ನದೇ ಸ್ಥಾನ ಹೊಂದಿದೆ. ಕಲೆಯನ್ನು ಗೌರವಿಸುವ ಮೂಲಕ ಕಲೆಗಾರರ ಬದುಕನ್ನು ಕಟ್ಟಿಕೊಳ್ಳಲು ದಾರಿ ಮಾಡಿಕೊಡಬೇಕು ಎಂದು ವಿನಂತಿಸಿದರು.
ಎಚ್.ಎಸ್. ಸೋಂಪೂರ, ಪ್ರಭು ಚವಡಿ, ರಾಜು ಸಾಂಗ್ಲಿಕರ, ಡಾ.ಸುನೀಲ ದಾನಿ, ಡಾ.ಐ.ಜೆ. ಮ್ಯಾಗೇರಿ, ಮಂಜುಳಾ ರೇವಡಿ, ವಿದ್ಯಾ ಬಂಡಿ ಎಸ್.ಎಸ್. ನರೇಗಲ್ಲ, ಎ.ಎಸ್. ವಡ್ಡರ, ಸಂಗಣ್ಣ ಯಲಿಗಾರ, ವಿಠ್ಟಲ ಸಾವಂತ, ಇತರರಿದ್ದರು.