ಗ್ರಾಮೀಣ ಪ್ರದೇಶದಲ್ಲಿ ಉಳಿದಿದೆ ಸಂಸ್ಕೃತಿ

ಚನ್ನರಾಯಪಟ್ಟಣ: ಗ್ರಾಮೀಣ ಪ್ರದೇಶದ ಸೊಬಗಿನೊಂದಿಗೆ ಸಂಸ್ಕೃತಿಯ ಸೊಗಡು ಉಳಿದರೆ ಮಾತ್ರ ಜಾನಪದ ಕ್ಷೇತ್ರವೂ ಉಳಿಯಲು ಸಾಧ್ಯ ಎಂದು ಜಾನಪದ ವಿದ್ವಾಂಸ ಹಾಗೂ ಚಿಂತಕ ಡಾ.ಹಿ.ಶಿ.ರಾಮಚಂದ್ರೇಗೌಡ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ ಹಾಗೂ ಹಾಸನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಸಂಭ್ರಮ ಹಾಗೂ ಜಾನಪದ ಪರಿಷತ್ ತಾಲೂಕು ಘಟಕವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಆಚಾರ, ವಿಚಾರ ಹಾಗೂ ಸಂಸ್ಕೃತಿ ಉಳಿದಿರುವುದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ. ನಗರ ಪ್ರದೇಶಗಳಲ್ಲಿ ಬೆಳಗಾಯಿತೆಂದರೆ ದುಡಿಸಿಕೊಳ್ಳುವುದೇ ಸಂಸ್ಕೃತಿಯಾಗಿದೆ. ನಗರಗಳಂತೆಯೇ ಹಳ್ಳಿಗಳೂ ಸ್ಮಾರ್ಟ್ ಆಗಬೇಕು. ಆದರೆ, ಸಂಸ್ಕೃತಿ ಹಾಗೆಯೇ ಉಳಿಯಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಆಧನೀಕರಣ ಹೆಚ್ಚಿದಂತೆಲ್ಲ ಮೂಲ ಸಂಸ್ಕೃತಿಯೊಂದಿಗೆ ಜಾನಪದ ಕ್ಷೇತ್ರವೂ ಕಣ್ಮರೆಯಾಗುತ್ತಿದೆ, ಹಳ್ಳಿ ಸೊಗಡು ಹಾಗೂ ಜಾನಪದದ ಮೇಲಿನ ಚಿಂತನೆ ಅಗತ್ಯವಿದ್ದು, ಯುವಪೀಳಿಗೆಯ ಗಮನವನ್ನು ಇತ್ತ ಸೆಳೆಯಬೇಕಿದೆ ಎಂದು ತಿಳಿಸಿದರು.

ನೆಲ ಸಂಸ್ಕೃತಿಯಲ್ಲಿಯೇ ಉದ್ಯೋಗ ಸೃಷ್ಟಿಸಿಕೊಳ್ಳಬೇಕಿದ್ದು, ನೈಪುಣ್ಯತೆ ಹಾಗೂ ಉದ್ಯೋಗ ಶೀಲತೆ ಅಗತ್ಯವಿದೆ. ಖಾಸಗಿ ಕಂಪನಿಗಳಲ್ಲಿ ಯಾವುದೇ ಕೆಲಸಗಾರನಿಗೂ ಭದ್ರತೆ ಇರುವುದಿಲ್ಲ, ಗ್ರಾಮೀಣ ಪ್ರದೇಶ ಅಸ್ತಿತ್ವದಲ್ಲಿ ಉಳಿಯಬೇಕೆಂದರೆ ಹಳ್ಳಿಗಳು ಉತ್ಪಾದನಾ ಕೇಂದ್ರಗಳಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ನೆಲೆ ಅಥವಾ ಮೂಲ ಸಂಸ್ಕೃತಿ ಉಳಿಸಿಕೊಳ್ಳುವ ಜವಾಬ್ದಾರಿಯೂ ಜಾನಪದ ಪರಿಷತ್‌ನ ಹೆಗಲ ಮೇಲಿದೆ ಎಂದು ತಿಳಿಸಿದರು.

ಜಾನಪದ ತಜ್ಞ ಮೇಟಿಕೆರೆ ಹಿರಿಯಣ್ಣ ರಚಿಸಿರುವ ನಮ್ಮ ದಿನಗಳು ಮತ್ತು ಇತರ ಪ್ರಬಂಧಗಳು ಹಾಗೂ ಸಾಹಿತಿ ಪ್ರೊ.ಎನ್.ತಮ್ಮಣ್ಣಗೌಡ ಅನುವಾದಗೊಳಿಸಿ ಬರೆದಿರುವ ಭಗವದ್ಗೀತೆ ಕಿರಿಯರಿಗಾಗಿ ಪುಸ್ತಕಗಳನ್ನು ಅತಿಥಿಗಳು ಬಿಡುಗಡೆ ಮಾಡಿದರು.

ಸಾಹಿತಿ ಪ್ರೊ.ಎನ್.ತಮ್ಮಣ್ಣಗೌಡ, ಜಾನಪದ ವಿದ್ವಾಂಸ ಮೇಟಿಕೆರೆ ಹಿರಿಯಣ್ಣ, ಜಿಲ್ಲಾ ಜಾನಪದ ಪರಿಷತ್ ಖಜಾಂಚಿ ಡಾ.ಐ.ಎಂ.ಮೋಹನ್, ತಾಲೂಕು ಜಾನಪದ ಪರಿಷತ್‌ನ ಅಧ್ಯಕ್ಷ ಎನ್.ಸ್ವಾಮಿಗೌಡ, ನಿಕಟಪೂರ್ವ ಅಧ್ಯಕ್ಷ ಶಿವನಗೌಡ ಪಾಟೀಲ್, ಉಪಾಧ್ಯಕ್ಷ ಮಟ್ಟನವಿಲೆ ಮೋಹನ್, ಖಜಾಂಚಿ ನಾಗೇಂದ್ರರಾಮ್, ಕಾರ್ಯದರ್ಶಿ ದಿಂಡಗೂರು ಸಂತೋಷ್, ಸಾಹಿತಿ ಎನ್.ಎಲ್.ಚನ್ನೇಗೌಡ ಇತರರು ಹಾಜರಿದ್ದರು.