ದೇಹಕ್ಕೆ ಕೊಡುವ ಪ್ರಾಶಸ್ಱ ದೇಶಕ್ಕೂ ನೀಡೋಣ

ಚಿಕ್ಕಮಗಳೂರು: ದೇಹಕ್ಕೆ ಕೊಡುವ ಪ್ರಾಶಸ್ಱ ದೇಶಕ್ಕೂ ಕೊಡಬೇಕು. ದೇಹದಲ್ಲಿ ದೇಶವಿದೆ, ದೇಶದಲ್ಲಿ ದೇಹವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

ವಕೀಲರ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯಾಂಗ ನೌಕರರ ಸಂಘದ ಆಶ್ರಯದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ ಮಾತೃವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶಪ್ರೇಮದ ಕಿಚ್ಚು ಹೆಚ್ಚಾಗುವ ದಿನವಿದು. ದೇಶದ ಸಂಸ್ಕೃತಿ, ಪರಂಪರೆ ಇತಿಹಾಸ ಅರ್ಥಮಾಡಿಕೊಳ್ಳುವ ಸಂದರ್ಭ. ಸತ್ಯಮೇವ ಜಯತೆ ಹೇಳುವ ದಿನ. ಆತ್ಮಕ್ಕೆ ಚ್ಯುತಿಯಿಲ್ಲದ ಬದುಕು ನಮ್ಮದಾಗಬೇಕು. ಇಡೀ ದೇಹವನ್ನು ಭಾರತಕ್ಕೆ ಹೋಲಿಸಿಕೊಂಡು ಅದನ್ನು ಸುಸ್ಥಿರವಾಗಿಡಲು ಸಂಕಲ್ಪಿಸಬೇಕಾದ ಸುದಿನ ಎಂದರು.

ಸಂಸ್ಕೃತಿ ಇಲ್ಲದ ನಾಗರಿಕತೆಯಿಂದ ಭಾರತ ಅರ್ಥವಾಗುವುದಿಲ್ಲ. ಆಕಳ ಬಣ್ಣ ಬದಲಾದರೂ ಹಾಲಿನ ಬಣ್ಣ ಒಂದೇ ಇರುತ್ತದೆ. ಭಾವ, ರಾಗ, ತಾಳಗಳ ಸಮ್ಮಿಲನವೇ ಭಾರತ. ಭಾರತ ಬರೀ ಮಣ್ಣು ಅಥವಾ ಜಲವಲ್ಲ ಅದೊಂದು ಚೈತನ್ಯ. ನಾವು ಸತ್ಯವನ್ನು ನುಡಿಯಬೇಕು, ಧರ್ಮದಿಂದ ನಡೆಯಬೇಕು ಎಂದು ಸಲಹೆ ನೀಡಿದರು.