ಸಂಗೀತದಿಂದ ಸುಸಂಸ್ಕೃತಿ, ಸಾಮರಸ್ಯ: ಪೇಜಾವರ ಶ್ರೀ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಕಲೆ, ಸಂಗೀತ ಭಾವೈಕ್ಯ ಬೆಳೆಸುವ ಕಲೆ. ರಾಗ, ತಾಳ, ಮೇಳಗಳಲ್ಲಿ ಸಾಮರಸ್ಯವಿದ್ದಾಗ ಅದು ಸಂಗೀತವಾಗುತ್ತದೆ. ಕಲೆ, ಸಾಹಿತ್ಯ ಚಂದ್ರರಂತೆ ಹೃದಯಕ್ಕೆ ಸಂತಸ ನೀಡಿ ಜನತೆಯನ್ನು ಸುಸಂಸ್ಕೃತರನ್ನಾಗಿಸಿವೆ. ನಮ್ಮ ರಾಷ್ಟ್ರೀಯ ಜನಜೀವನವೂ ಪರಸ್ಪರ ಸಾಮರಸ್ಯದಿಂದ ಸಂಗೀತದಂತಿರಬೇಕು ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಪುತ್ತಿಗೆಯ ವಿವೇಕಾನಂದ ನಗರದ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗವೇದಿಕೆಯಲ್ಲಿ ಮೂರು ದಿನಗಳ 25ನೇ ವರ್ಷದ ಆಳ್ವಾಸ್ ವಿರಾಸತ್ 2019 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ರಜತ ಸಂಭ್ರಮವನ್ನು ಶುಕ್ರವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸೂರ್ಯನಂತೆ ತತ್ವಜ್ಞಾನ, ಯೋಗ, ಅಧ್ಯಾತ್ಮ ಹೀಗೆ ಸಂಸ್ಕೃತಿ ಪಶ್ಚಿಮದತ್ತ ಸಾಗುತ್ತಿದೆ. ಆದರೆ ರಾಹುಕೇತುವಿನಂತೆ ವಿಕೃತಿಗಳನ್ನು ಪಶ್ಚಿಮದಿಂದ ಪೂರ್ವಕ್ಕೆ ಸ್ವಾಗತಿಸಿ ನಮ್ಮಲ್ಲಿ ಹಲವೆಡೆ ಅನುಸರಿಸುತ್ತಿರುವುದು ಖೇದಕರ ಎಂದರು.

ದೇಶ ವಿದೇಶಗಳ ಹಲವು ಕ್ಷೇತ್ರಗಳಿಗೆ ಯುವ ಪ್ರತಿಭೆಗಳನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮೂಲಕ ಕೊಡುಗೆಯಾಗಿ ನೀಡುವ ಮೂಲಕ ಡಾ.ಎಂ.ಮೋಹನ ಆಳ್ವ ಸಮಾಜಕ್ಕೊಂದು ನಿದರ್ಶನವಾಗಿ ಬೆಳೆದಿದ್ದಾರೆ ಎಂದು ನಿಟ್ಟೆ ಸಮೂಹ ಸಂಸ್ಥೆ ಅಧ್ಯಕ್ಷ ಎನ್.ವಿನಯ್ ಹೆಗ್ಡೆ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ಕೆ.ಅಮರನಾಥ ಶೆಟ್ಟಿ, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಂಗಳೂರು ಕೆನರಾ ಬ್ಯಾಂಕ್ ಮಹಾಪ್ರಬಂಧಕರಾದ ಎಂ.ಲಕ್ಷ್ಮೀ ನಾರಾಯಣನ್, ಹಾರ್ದಿಕ್ ಕುಮಾರ್, ಉದ್ಯಮಿಗಳಾದ ಶಶಿಧರ್ ಶೆಟ್ಟಿ, ರವೀಂದ್ರ ಆಳ್ವ, ಕೆ.ಶ್ರೀಪತಿ ಭಟ್, ಸುರೇಶ್ ಭಂಡಾರಿ, ಸುರೇಶ್ ಶೆಟ್ಟಿ ಗುರ್ಮೆ, ದೇವಿಪ್ರಸಾದ್ ಶೆಟ್ಟಿ, ಮುಸ್ತಾಫ್ ಎಸ್., ಉದಯ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಧ್ಯಾಪಕಿ ದೀಪಾ ರತ್ನಾಕರ್ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಪಿಆರ್‌ಒ ಡಾ.ಪದ್ಮನಾಭ ಶೆಣೈ ಪ್ರಶಸ್ತಿ ಪತ್ರ ವಾಚಿಸಿದರು.

ಉದ್ಘಾಟನಾ ಸಮಾರಂಭದ ಮೊದಲು ಗಣ್ಯರನ್ನು ಆಳ್ವಾಸ್ ಸಾಂಸ್ಕೃತಿಕ ಕಲಾತಂಡದ ವಿದ್ಯಾರ್ಥಿಗಳು ಹಾಗೂ ವಾದ್ಯವೃಂದ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಂಡಿತು.

ಹರಿಹರನ್‌ಗೆ ವಿರಾಸತ್ ಪ್ರಶಸ್ತಿ: ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಹರಿಹರನ್ ಅವರಿಗೆ 2019ರ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು 1 ಲಕ್ಷ ರೂ. ಗೌರವ ನಗದು, ಸ್ಮರಣಿಕೆ, ಸನ್ಮಾನಪತ್ರ ಪುರಸ್ಕಾರ ಸಹಿತ ನೀಡಿ ಗೌರವಿಸಲಾಯಿತು. ವಿರಾಸತ್ ರಜತ ಸಂಭ್ರಮದ ಅಂಗವಾಗಿ ಅಂಚೆ ಇಲಾಖೆ ಹೊರತಂದ ವಿಶೇಷ ಲಕೋಟೆಯನ್ನು ಹರಿಹರನ್ ಅನಾವರಣಗೊಳಿಸಿದರು. ಉತ್ತಮ ಸಂಗೀತವೆನ್ನುವುದು ಔಷಧವಿದ್ದಂತೆ. ಅದು ಹೃದಯ, ಮನಸ್ಸಿಗೆ ಶಾಂತಿ ನೀಡುತ್ತದೆ. ಸಂಗೀತವೂ ಯೋಗದಂತೆ ಪರಿಣಾಮಕಾರಿಯಾಗಿದೆ. ಆಳ್ವಾಸ್ ವಿರಾಸತ್ ಪ್ರಶಸ್ತಿ ಭಾವನಾತ್ಮಕವಾಗಿ ಸ್ವೀಕರಿಸಿದ್ದೇನೆ. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ಹರಿಹರನ್ ಮನದ ಮಾತುಗಳನ್ನಾಡಿದರು.

ಕಣ್ಮನ ತಣಿಸಿದ ನೃತ್ಯ, ಸಂಗೀತ: ಮುಸ್ಸಂಜೆ ಬೀಸುವ ತಂಗಾಳಿಗೆ ಸಾಥ್ ನೀಡಿ ವಿಶೇಷ ಅನುಭವ ಕಟ್ಟಿಕೊಡುವಲ್ಲಿ ವಿರಾಸತ್‌ನ ಮೊದಲ ದಿನ ಯಶಸ್ವಿಯಾಯಿತು. ಕಣ್ಮನಗಳನ್ನು ತಣಿಸಿ, ಸಹೃದಯ ಪ್ರೇಕ್ಷಕರನ್ನು ಸಂಗೀತ, ನೃತ್ಯ ರಸದೌತಣ ಉಣಿಸುವ ಸಾರ್ಥಕ ಪ್ರಯತ್ನ ಜೈನಕಾಶಿಯಲ್ಲಿ ಶುಕ್ರವಾರ ನಡೆಯಿತು. 24 ವರ್ಷದಿಂದ ಸಹಸ್ರಾರು ಕಲಾವಿದರಿಗೆ ವೇದಿಕೆ ನೀಡಿ, ಪ್ರೇಕ್ಷಕರಲ್ಲಿ ಕಲಾಸಕ್ತಿಯನ್ನು ಮೂಡಿಸಿದ ಆಳ್ವಾಸ್ ವಿರಾಸತ್, ತನ್ನ ರಜತ ಸಂಭ್ರಮದಲ್ಲೂ ಸಂಗೀತ, ನೃತ್ಯದ ರಸಾನುಭವ ನೀಡಿದೆ. ಇನ್ನೆರೆಡು ದಿನ ನಡೆಯಲಿರುವ ವಿರಾಸತ್ ಸಾಂಸ್ಕೃತಿಕ ಕಲಾಪಕ್ಕೆ ಮೊದಲ ದಿನ ಮುನ್ನುಡಿಯಾಯಿತು.
ಮೊದಲ ದಿನ 50 ಸಾವಿರದಷ್ಟು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದು, ಕೆಲೀನಿಯಲ್ ಕಸನ್ಸ್ ಖ್ಯಾತಿಯ ಹರಿಹರನ್ ಹಾಗೂ ಲೆಸ್ಲೆ ಲಿವಿಸ್ ಪ್ರಸ್ತುಪಡಿಸಿದ ‘ರಸ ಸಂಯೋಗ’. ಬಳಿಕ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆದು ಮೋಹಿನಿಯಾಟ್ಟಂ (ಗಣೇಶ ವಂದನ), ದಾಸ ದೀಪಾಂಜಲಿ ಬಡಗುತಿಟ್ಟು ಯಕ್ಷಗಾನ, ಸಾಹಸಮಯ ಮಲ್ಲಕಂಬ, ಗುಜರಾತಿನ ದಾಂಡಿಯ ನೃತ್ಯ ವಿಶೇಷ ಆಕರ್ಷಣೆ ನೀಡಿತು.

 ಸೌಂದರ್ಯ ಪ್ರಜ್ಞೆಯುಳ್ಳ ಸಹಸ್ರಾರು ಪ್ರೇಕ್ಷಕ ವರ್ಗವನ್ನು ಕಟ್ಟಿರುವುದು ಆಳ್ವಾಸ್ ವಿರಾಸತ್‌ನ 25 ವರ್ಷಗಳ ಪ್ರಯತ್ನವನ್ನು ಸಾರ್ಥಕಗೊಳಿಸಿದೆ. ಕಲೆ, ಸಂಸ್ಕೃತಿ ಮೂಲಕ ಸಮಾಜಕ್ಕೆ ಸಂದೇಶ ನೀಡುವ ನಮ್ಮ ಕನಸು ನನಸಾಗಿದೆ.
– ಡಾ.ಎಂ ಮೋಹನ ಆಳ್ವ, ಆಳ್ವಾಸ್ ವಿರಾಸತ್ ಸಮ್ಮೇಳನದ ರುವಾರಿ