ಶಿಕ್ಷಕ ವೃತ್ತಿ ಘನತೆ ಕಾಪಾಡಿಕೊಳ್ಳಿ

ಬೀದರ್: ಶಿಕ್ಷಕರ ವೃತ್ತಿ ಬಹಳ ಪವಿತ್ರವಾದದ್ದು. ಇದಕ್ಕೆ ಚ್ಯುತಿ ಬಾರದಂತೆ ವೃತ್ತಿ ಘನತೆ, ಗೌರವ ಕಾಪಾಡಿಕೊಂಡು ಮಕ್ಕಳ ಭವಿಷ್ಯ ರೂಪಿಸಬೇಕು ಎಂದು ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಉಮಾಕಾಂತ ಪಾಟೀಲ್ ಶಿಕ್ಷಕ ಸಮುದಾಯಕ್ಕೆ ಸಲಹೆ ನೀಡಿದರು.
ನಗರದ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಜ್ಞಾನ ಕಾರಂಜಿ ಚಾರಿಟೇಬಲ್ ಟ್ರಸ್ಟ್ನ ಗ್ರಾಮೀಣ ಪ್ರದೇಶದಲ್ಲಿರುವ ನೈಟಿಂಗೇಲ್ ಪಬ್ಲಿಕ್ ಶಾಲೆಗಳ ಅಂತರ್ ಶಾಲಾ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಶಿಕ್ಷಣ ನೀಡಿ ಎಂದರು.
ಕರ್ನಾಟಕ ಕಾಲೇಜಿನ ಸ್ನಾತಕೋತ್ತರ ಕನ್ನಡ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾದರಿ. ಹೀಗಾಗಿ ಶಿಕ್ಷಕರು ಸರಳ, ಸಜ್ಜನಿಕೆಯಿಂದ ಇರಬೇಕು. ಮಕ್ಕಳನ್ನು ಉತ್ತಮ ಪ್ರಜೆಯಾಗಿ ರೂಪಿಸುವ ನಿಟ್ಟಿನಲ್ಲಿ ನೈತಿಕ ಶಿಕ್ಷಣ ನೀಡಬೇಕು. ಶಿಕ್ಷಣ ನೌಕರಿಗಾಗಿ ಅಲ್ಲ. ಬದುಕಿಗಾಗಿ ಎಂಬುದನ್ನು ತಿಳಿಯಬೇಕು ಎಂದು ಹೇಳಿದರು.
ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿ, ಭೂಮಿ, ಹಣ ಮತ್ತು ಬಂಗಾರ ಇದ್ದರೆ ಶ್ರೀಮಂತರಾಗುವುದಿಲ್ಲ. ಜ್ಞಾನದ ರತ್ನ ಇದ್ದವರೇ ನಿಜವಾದ ಶ್ರೀಮಂತರು. ಗುಣಮಟ್ಟದ ಶಿಕ್ಷಣದ ಜತೆಗೆ ಜ್ಞಾನ ಕಾರಂಜಿ ಚಾರಿಟೇಬಲ್ ಟ್ರಸ್ಟ್ ಸಂಸ್ಕಾರಯುತ ನೈತಿಕ ಶಿಕ್ಷಣ ನೀಡುತ್ತಿದೆ. ನೈತಿಕತೆ ಇಲ್ಲದ ಶಿಕ್ಷಣದಿಂದ ಮಕ್ಕಳಲ್ಲಿ ರಾಕ್ಷಸ ಪ್ರವೃತ್ತಿ ಬೆಳೆಯುತ್ತದೆ ಎಂದರು.
ಶ್ರೀ ಶಿವಾನಂದ ಸ್ವಾಮೀಜಿ ಹುಲಸೂರು ಸಾನ್ನಿಧ್ಯ, ಟ್ರಸ್ಟ್ ಅಧ್ಯಕ್ಷ ಬಸವರಾಜ ಭರಶೆಟ್ಟಿ ಅಧ್ಯಕ್ಷತೆ ವಸಿದ್ದರು. ಮೇಘಾ ತರನ್ನಳ್ಳೆ ಇದ್ದರು. ನಟಕಾರ ಸ್ವಾಗತಿಸಿದರು. ಅಲ್ಕಾವತಿ ನಿರೂಪಣೆ ಮಾಡಿದರು. ರವೀಂದ್ರ ವಂದಿಸಿದರು. ಜಾಗತಿಕ ತಾಪಮಾನ ಕುರಿತ ನಿಬಂಧ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಪಡೆದ ಸುಮಿತ್ ಶಿವಶಂಕರ ಕೊಳಾರ್ಗೆ ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಕಡ್ಡಾಯ ಮತದಾನ ಮಾಡಿ: ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳಿಸಬೇಕು ಎಂದು ಹುಲಸೂರು ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹೇಳಿದರು. ಕರ್ನಾಟಕದಲ್ಲಿ ಏ.18, 23ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ತಮ್ಮ ಹಕ್ಕು ಚಲಾಯಿಸಬೇಕು. ಚುನಾವಣೆ ಎಂದರೆ ಹಬ್ಬದಂತೆ ಸಂಭ್ರಮಿಸಬೇಕು ಎಂದರು.