ಶ್ರೀರಾಮುಲು ಅವರೇನು ಕನ್ನಡ ಪಂಡಿತರಲ್ಲ ಬಿಡಿ: ಸಿ.ಟಿ. ರವಿ

ಬಳ್ಳಾರಿ: ಬಳ್ಳಾರಿ ಉಪಚುನಾವಣೆಯೂ ಅಧಿಕಾರದ ಮದ ಹಾಗೂ ಸ್ವಾಭಿಮಾನದ ನಡುವೆ ನಡೆಯುತ್ತಿದೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ಗಣಿನಾಡಿನ ಹೊಸಪೇಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಜೆಡಿಎಸ್​ನವರದ್ದು ಹಗಲು ವೇಷದ ನಾಟಕ. ಇದು ಬಳ್ಳಾರಿ ಜನರ ಮುಂದೆ ನಡೆಯುವುದಿಲ್ಲ ಎಂದು ಕಿಡಿಕಾರಿದರು.

ಶ್ರೀರಾಮುಲು ಅವರದ್ದು ಬಳ್ಳಾರಿ ಸೊಗಡಿನ ಭಾಷೆ. ಅವರೇನು ಕನ್ನಡ ಪಂಡಿತರಲ್ಲ ಬಿಡಿ ಎಂದು ವ್ಯಂಗ್ಯವಾಡಿದ ರವಿ, ಉಗ್ರಪ್ಪ ಅವರು 1 ಲಕ್ಷ ಕೋಟಿ ರೂ. ಗಣಿ ಹಗರಣ ಬಯಲಿಗೆಳೆದಿದ್ದಾರೆ ಎಂದು ಕಾಂಗ್ರೆಸ್​ನವರು ಹೇಳುತ್ತಾರೆ. ಆಂಧ್ರದಲ್ಲಿ ಬ್ರಹ್ಮಣಿ ಸ್ಟೀಲ್ ಕಂಪನಿ ಸ್ಥಾಪನೆಗೆ ಜಾಗ ಕೊಟ್ಟಿದ್ದು ಯಾರು? ಒಂದು ಕಾಲದಲ್ಲಿ ಕಾಂಗ್ರೆಸ್​ಗೆ ವೈ.ಎಸ್.ರಾಜಶೇಖರ ರೆಡ್ಡಿ ಎಟಿಎಂ ರೀತಿ ಇದ್ದರು ಎಂದು ಟೀಕಿಸಿದರು.

ಬಿಜೆಪಿಯ ಸಾಮರ್ಥ್ಯ ಮತ್ತು ಶ್ರೀರಾಮುಲು ಅವರ ಜನಪ್ರಿಯತೆ ಅರಿತು ಕಾಂಗ್ರೆಸ್​ನ 8 ಸಚಿವರು, ಸಂಸದರು, ಮಾಜಿ ಸಚಿವರು ಹಾಗೂ 62 ಶಾಸಕರು ಬಳ್ಳಾರಿಯಲ್ಲಿ ಬೀಡು ಬಿಟ್ಟಿದ್ದಾರೆ. ರಾಜ್ಯದ 5 ಕ್ಷೇತ್ರದಲ್ಲೂ ಬಿಜೆಪಿಗೆ ಗೆಲ್ಲುವು ಖಚಿತ ಎಂದರು. (ದಿಗ್ವಿಜಯ ನ್ಯೂಸ್​)