ಚಿಕ್ಕಮಗಳೂರು: ನನಗೆ 1996ರಲ್ಲಿಯೂ ಕೆಲ ತಿಂಗಳುಗಳ ಕಾಲ ಪಕ್ಷದಲ್ಲಿ ಯಾವುದೇ ಜವಾಬ್ದಾರಿಗಳು ಇರಲಿಲ್ಲ. ಅದೇ ರೀತಿ 2023-24ರಲ್ಲಿ 10 ತಿಂಗಳ ಕಾಲ ಯಾವುದೇ ಜವಾಬ್ದಾರಿಗಳಿಲ್ಲದೆ ಸುಮ್ಮನಿರಬೇಕಾಗಿತ್ತು. ಇದೀಗ ಪಕ್ಷ ನನಗೊಂದು ಜವಾಬ್ದಾರಿ ನೀಡಿದೆ. ಈ ಜವಾಬ್ದಾರಿಯನ್ನು ಪಕ್ಷದ ಸಂಘಟನೆಗಾಗಿ ಸಮರ್ಪಕವಾಗಿ ಬಳಸಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.
ಭಾನುವಾರ ಸಂಜೆ ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಪಕ್ಷದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಮುಖಂಡರು ಪಕ್ಷಕ್ಕಾಗಿ ನಾನು ಸಲ್ಲಿಸಿದ್ದ ಸೇವೆಯನ್ನು ಗಮನಿಸಿ ವಿಧಾನ ಪರಿಷತ್ ಸ್ಥಾನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಇದಕ್ಕಾಗಿ ಪಕ್ಷದ ಎಲ್ಲ ಮುಖಂಡರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.
ಯಾವುದೇ ಅಧಿಕಾರವಿಲ್ಲದಿರುವ ಸಂದರ್ಭದಲ್ಲಿಯೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಇಲ್ಲದಿದ್ದರೂ ನಾನು ಕಾರ್ಯಕರ್ತ ಎಂಬ ಹೆಮ್ಮೆ ಇರುತ್ತದೆ. ಹೀಗೆ ನಾವು ಪಕ್ಷಕ್ಕೆ ನ್ಯಾಯಯುತವಾಗಿ ದುಡಿದಾಗ ಮಾತ್ರ ನಮಗೆ ಪಕ್ಷ ಸೂಕ್ತ ಸ್ಥಾನಮಾನ ನೀಡುತ್ತದೆ ಎಂದು ಹೇಳಿದರು.
ಪಕ್ಷ ಈಗ ನನಗೆ ಸ್ಥಾನಮಾನ ನೀಡಿರುವುದು ಮುಂಬರುವ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ ಗೆಲ್ಲಿಸುವುದಕ್ಕಾಗಿ ಎಂದು ಭಾವಿಸಿದ್ದೇನೆ. ಜತೆಗೆ ಜಿಲ್ಲೆ ಹಾಗೂ ರಾಜ್ಯದಲ್ಲಿಯೂ ಬಿಜೆಪಿಯನ್ನು ಬಲ ಪಡಿಸಲು ಶ್ರಮಿಸುತ್ತೇನೆ. ಕಳೆದ ವಿಧಾನಸಭಾ ಚುನಾವಣೆಯನ್ನು ನಾವು ಎಂದು ಕೆಟ್ಟ ಕನಸು ಎಂದು ಮರೆಯಬಾರದು. ಬದಲಿಗೆ ಅದೊಂದು ನಮಗೆ ಎಚ್ಚರಿಕೆಯ ಗಂಟೆಯಾಗಬೇಕು. ಮುಂದೆ ಚಿಕ್ಕಮಗಳೂರು ಜಿಲ್ಲೆಯನ್ನು ಬಿಜೆಪಿ ಭದ್ರಕೋಟೆಯನ್ನಾಗಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯ ಪ್ರವೃತ್ತರಾಗಿರಬೇಕು ಎಂದರು.
ಪಕ್ಷ ಸಂಘಟನೆಗಾಗಿ ಎಷ್ಟು ಸಮಯ ನೀಡುತ್ತೇವೆಯೋ ಅಷ್ಟೇ ಸಮಯವನ್ನು ಜನರೊಂದಿಗೆ ಕಳೆಯಬೇಕು. ಆಗ ಜನರ ಕಷ್ಟಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆಗ ಮಾತ್ರವೇ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ಪಕ್ಷವನ್ನು ತಾಯಿ ಎಂದು ಭಾವಿಸಿ ಕೆಲಸ ಮಾಡಿದವರಿಗೆ ಎಂದು ಅನ್ಯಾಯವಾಗುವುದಿಲ್ಲ. ಕೆಲ ಕಾಲ ಯಾವುದೇ ಜವಾಬ್ದಾರಿ ಇಲ್ಲದೆ ಸುಮ್ಮನೆ ಕೂರಬೇಕಾಗುತ್ತದೆ ಹೊರತಾಗಿ ಬೇರಾವುದೇ ತೊಂದರೆಯಾಗುವುದಿಲ್ಲ. ಯಾರು ಎಷ್ಟೇ ಕಾಲು ಎಳೆದರೂ ಮೇಲಿರುವ ದೇವರು ನಮ್ಮನ್ನು ಕೈಹಿಡಿದು ಮೇಲೆತ್ತುತ್ತಾನೆ. ಜಿಲ್ಲೆಯ ಪ್ರಮುಖ ನಾಯಕರಾದ ಸಿ.ಟಿ.ರವಿ ಅವರಿಗೆ ಮತ್ತೆ ಅಧಿಕಾರ ಸಿಗುತ್ತಿರುವುದು ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್, ಒಬಿಸಿ ಮುಖಂಡ ರಾಜಪ್ಪ, ಪ್ರಮುಖರಾದ ಕೋಟೆ ರಂಗನಾಥ್, ಎಚ್.ಸಿ.ಕಲ್ಮರುಡಪ್ಪ ಇತರರಿದ್ದರು.