ನಿಖಿಲ್​ ಗೆಲುವು ತಡೆಯಲು ಯಾವ ಮೀರ್​ ಸಾದಿಕ್​ಗಳಿಂದಲೂ ಸಾಧ್ಯವಿಲ್ಲ: ಪುಟ್ಟರಾಜು

ಮಂಡ್ಯ: ಮಂಡ್ಯದಲ್ಲಿ ಮಾಜಿ ಪ್ರಧಾನ ಮಂತ್ರಿ ಮತ್ತು ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡರಂತೆ ನಿಖಿಲ್​ ಕುಮಾರಸ್ವಾಮಿ ಅವರನ್ನು ಬೆಳೆಸಲು ನಾವು ಬಯಸಿದ್ದೇವೆ. ಹಾಗಾಗಿ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.

ಕೆ.ಆರ್​.ಪೇಟೆಯಲ್ಲಿ ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್​ ಅವರು ಈ ಮಣ್ಣಿನಲ್ಲಿ ಬೆಳೆದರೆ ದೇಶಕ್ಕೆ ಮುಂದೆ ಬೆಳಕು ಸಿಗಬಹುದು ಎಂಬ ಉದ್ದೇಶದಿಂದ ಅವರನ್ನು ಮಂಡ್ಯಕ್ಕೆ ಕರೆತಂದಿದ್ದೇವೆ. ನಿಖಿಲ್​ ಅವರ ಗೆಲುವನ್ನು ಯಾವ ಮೀರ್​ ಸಾದಿಕ್​ಗಳಿಂದಲೂ ತಡೆಯಲು ಸಾಧ್ಯವಿಲ್ಲ. ನಾನು ಲೋಕಸಭೆ ಚುನಾವಣೆಯಲ್ಲಿ 5 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆ. ಆದರೆ ಈ ಬಾರಿ ನಿಖಿಲ್​ ಭಾರಿ ಅಂತರದಿಂದ ಗೆಲ್ಲುತ್ತಾರೆ. ನಿಖಿಲ್​ ನಿಜವಾದ ಜಾಗ್ವಾರ್​ ಎಂದು ಸಾಬೀತುಪಡಿಸುತ್ತಾರೆ ಎಂದು ಸಚಿವ ಪುಟ್ಟರಾಜು ತಿಳಿಸಿದರು.

ಜೆಡಿಎಸ್​ ಪಕ್ಷದವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಚೆಲುವರಾಯಸ್ವಾಮಿ ಆರೋಪಿಸುತ್ತಾರೆ. ಜಿಲ್ಲೆಯಲ್ಲಿ ಏಳು ಶಾಸಕರನ್ನು ಪಕ್ಷದಿಂದ ಗೆಲ್ಲಿಸಿಕೊಂಡು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ನಮ್ಮ ಶಾಸಕರನ್ನು ಎಲ್ಲಿಗೆ ಕಳುಹಿಸಲಿ. ಅದಕ್ಕಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಜಿಲ್ಲೆಯಲ್ಲಿ ಮೀರ್​ ಸಾದಿಕ್​ಗಳಿದ್ದಾರೆ. ಅವರು ಯಾವ್ಯಾವ ಸಮಯದಲ್ಲಿ ಏನೇನು ಮಾಡಿದ್ದಾರೆ ಎಂದು ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.