ಕಾಂಗ್ರೆಸ್​ ಶಾಸಕರ ಮೇಲೆ ಮುಗಿಬಿದ್ದ ಜೆಡಿಎಸ್​ ಶಾಸಕರು

ಬೆಂಗಳೂರು: ಜೆಡಿಎಸ್​ ಜತೆ ‘ಕೈ’ ಜೋಡಿಸಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಕೆಲ ಕಾಂಗ್ರೆಸ್​ ಶಾಸಕರಿಗೆ ಜೆಡಿಎಸ್​ ಶಾಸಕರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಮಂಗಳವಾರವಷ್ಟೇ ಕಾಂಗ್ರೆಸ್ ಮೇಲೆ ಗರಂ ಆಗಿದ್ದ ಸಚಿವ ಪುಟ್ಟರಾಜು ಅವರು ಮತ್ತೆ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ​ ಗೊಡ್ಡು ಬೆದರಿಕೆಗೆ ಹೆದರಲ್ಲ. ನಾವು ಬಿಜೆಪಿ ಸೇರಿದ್ದಾಗ ಒಳ್ಳೆಯ ಸರ್ಕಾರ ಕೊಟ್ಟಿದ್ದೇವೆ. ಕಾಂಗ್ರೆಸ್ ನಮ್ಮ ವಿರುದ್ಧ ಮಾತನಾಡುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.

ಮಂಗಳವಾರ ನಡೆದ ದೆಹಲಿಯ ವಿಶೇಷ ಪ್ರತಿನಿಧಿಯಾಗಿರುವ ಅಜಯ್ ಸಿಂಗ್ ಪದಗ್ರಹಣ ವೇಳೆ ನಾವೂ ಬರಬೇಕು ಅಂದುಕೊಂಡಿದ್ದೆವು. ಅವರೂ ಕೂಡ ಆಹ್ವಾನ ನೀಡಿದ್ದರು. ಆದರೆ, ಸಿದ್ದರಾಮಯ್ಯ ಅವರನ್ನು ಕೂರಿಸಿಕೊಂಡು ಕಾಂಗ್ರೆಸ್ ಶಾಸಕರು ನಮ್ಮ ಮೇಲೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರೆ, ನಮಗೆ ಬೇಸರ ಆಗಲ್ವಾ? ಪ್ರೀತಿ- ವಿಶ್ವಾಸದಿಂದ ನಡೆಸಿಕೊಂಡರೆ ನಾವೂ ಹೋಗುತ್ತಿದ್ದೆವು ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರನ್ನು ಹೊಗಳಿದರೆ ತಪ್ಪೇನು ಎಂಬ ಬಸವರಾಜ ರಾಯರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ಪುಟ್ಟರಾಜು, ರಾಯರೆಡ್ಡಿ ಮೊದಲು ತಮ್ಮ ಮೂಲವನ್ನು ಪತ್ತೆ ಮಾಡಿಕೊಳ್ಳಲಿ. ಪ್ರಬುದ್ಧ ಆಡಳಿತ ನಡೆಸುವುದರಲ್ಲಿ ಸಿಎಂ ಕುಮಾರಸ್ವಾಮಿ ಪಿ.ಎಚ್​.ಡಿ. ಪಡೆದಿದ್ದಾರೆ. ಅವರ ಆಡಳಿತದ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆ ಮಾಡುತ್ತಿದ್ದರೆ ಕೇಳಿಕೊಂಡು ಸುಮ್ನೆ ಕೂರುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.

ದೇಶದಲ್ಲೇ ಕುಮಾರಸ್ವಾಮಿ ಅತ್ಯುತ್ತಮ ಮುಖ್ಯಮಂತ್ರಿ
ಸಚಿವ ಪುಟ್ಟರಾಜು ಅವರ ಹೇಳಿಕೆಗೆ ಧ್ವನಿಗೂಡಿಸಿರುವ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್, ಮನಸ್ಸಿಗೆ ಬಂದಂತೆ ಮಾತನಾಡುವ ಕೆಳಹಂತದ ಶಾಸಕರನ್ನು ಕಾಂಗ್ರೆಸ್​ ಮೊದಲು ಹದ್ದುಬಸ್ತಿನಲ್ಲಿಡಬೇಕು. ಸರ್ಕಾರದ ಯಾವುದೇ ಬೆಳವಣಿಗೆಗೆ ಸಂಬಂಧಿಸಿದಂತೆ ಮಾತನಾಡಲು ದೇವೇಗೌಡರು, ರಾಹುಲ್ ಗಾಂಧಿ, ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಇದ್ದಾರೆ. ತಮ್ಮ ನಾಯಕರನ್ನು ಖುಷಿ ಪಡಿಸಲು ಕಾಂಗ್ರೆಸ್ ಶಾಸಕರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮೊನ್ನೆ ಸೋಮಶೇಖರ್ ಅವರು ಬೆಂಗಳೂರಿಗೆ ಯಾವುದೇ ಅಭಿವೃದ್ದಿ ಅನುದಾನ ನೀಡೇ ಇಲ್ಲ ಎಂದರು. ಮೆಟ್ರೋ ಎರಡನೇ ಹಂತಕ್ಕೆ ಕ್ಲಿಯರೆನ್ಸ್ ಕೊಟ್ಟಿದ್ದು ಯಾರು? ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದು ಯಾರು? ದೇಶದಲ್ಲೇ ಕುಮಾರಸ್ವಾಮಿ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೊಗಳುತ್ತಿರುವಾಗ ಇವರು ಏನೇನೋ ಹೇಳಿಕೆ ಕೊಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.