ಪಶ್ಚಿಮ ಬಂಗಾಳದಲ್ಲಿ ಕೇಸರಿ ಆಯಿತು ಎಡಪಕ್ಷಗಳ ರಂಗು, ಬಿಜೆಪಿಗೆ ತಂತು 18 ಕ್ಷೇತ್ರಗಳ ಅದೃಷ್ಟದ ಕಂತು

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 18 ಸೀಟುಗಳನ್ನು ತನ್ನದಾಗಿಸಿಕೊಂಡಿದೆ. ಎಡಪಕ್ಷಗಳ ಕೆಂಪು ಬಣ್ಣ ಕೇಸರಿಯಾಗುತ್ತಾ ಸಾಗಿದ್ದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಇದರ ಭರಪೂರ ಲಾಭ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

2014ರಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಕೇವಲ 2 ಸೀಟುಗಳನ್ನು ಗೆದ್ದುಕೊಂಡಿತ್ತು. ಆಗ ಅದರ ಮತಗಳಿಕೆ ಕೇವಲ ಶೇ.17 ಆಗಿತ್ತು. ಆದರೆ, 5 ವರ್ಷ ಕಳೆಯುವಷ್ಟರಲ್ಲಿ ಅದರ ಮತಗಳಿಕೆ ಪ್ರಮಾಣ ಶೇ.40ಕ್ಕೆ ಏರಿಕೆಯಾಗಿದೆ. ಇದರ ಪರಿಣಾಮ 18 ಕ್ಷೇತ್ರಗಳ ಅದೃಷ್ಟದ ಕಂತು ಬಿಜೆಪಿಯದ್ದಾಗಿದೆ.

ಇದೇ ವೇಳೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ನ ಮತಗಳಿಕೆಯ ಪ್ರಮಾಣ ಶೇ.6ಕ್ಕೆ ಹೆಚ್ಚಳವಾಗಿದೆ. ಹೀಗಾಗಿ ಅದು 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗಿದೆ. 2014ರಲ್ಲಿ ಶೇ.23 ಮತಗಳಿಕೆ ಹೊಂದಿದ್ದ ಎಡಪಕ್ಷದ ಮತಗಳಿಕೆ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಲೋಕಸಭೆಯಲ್ಲಿ ಶೂನ್ಯ ಸಾಧನೆ ಮಾಡಿದೆ. ಕಾಂಗ್ರೆಸ್​ ಕೇವಲ ಒಂದು ಸ್ಥಾನ ಗೆದ್ದು ಶೂನ್ಯ ಸಾಧನೆಯ ಮುಖಭಂಗದಿಂದ ಪಾರಾಗಿದೆ.

2014ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕಳಪೆ ಸಾಧನೆ ಮಾಡಿದ ನಂತರದಲ್ಲಿ ಬಿಜೆಪಿ ಈ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಲು ನಿರ್ಧರಿಸಿತು. ಇದಕ್ಕಾಗಿ ಸಾಕಷ್ಟು ಶ್ರಮಗಳನ್ನು ಹಾಕಲಾರಂಭಿಸಿತು. ಈ ಬಾರಿಯ ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ 13 ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಇದು ಸೂಕ್ತ ಪ್ರತಿಫಲ ನೀಡಿತು ಎಂದು ಹೇಳಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *