ಶಬರಿಮಲೆ ಬಿಕ್ಕಟ್ಟು: ಸಿಪಿಐ(ಎಂ), ಬಿಜೆಪಿ ಕಾರ್ಯಕರ್ತರ ಮನೆ ಮೇಲೆ ಕಚ್ಚಾ ಬಾಂಬ್​ ದಾಳಿ

ಕೋಯಿಕ್ಕೋಡ್​​: ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದ ನಂತರ ದೇವರ ನಾಡಿನಲ್ಲಿ ಭುಗಿಲೆದ್ದಿರುವ ಆಕ್ರೋಶ ಇನ್ನೂ ಮುಂದುವರಿದಿದೆ. ಕಿಡಿಗೇಡಿಗಳು ದೇಶೀಯ ನಿರ್ಮಿತ ಬಾಂಬ್​ಗಳನ್ನು ಸಿಪಿಐ(ಎಂ) ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರ ಮನೆಗೆ ಎಸೆದಿರುವ ಘಟನೆ ಕೋಯಿಕ್ಕೋಡ್​​ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಘಟನೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಕೊಯಿಲಾಂಡಿ ಪ್ರದೇಶ ಸಮಿತಿ ಸದಸ್ಯ ಶಿಜು ಅವರ ಮನೆಯ ಮೇಲೆ ಮೊದಲ ದಾಳಿ ನಡೆದಿದ್ದು, ಸ್ಥಳೀಯ ಬಿಜೆಪಿ ಪಕ್ಷದ ನಾಯಕ ವಿ.ಕೆ.ಮುಕುಂದನ್​​ ಮನೆ ಮೇಲೂ ಕಚ್ಚಾ ಬಾಂಬ್​ಗಳಿಂದ ದಾಳಿ ಮಾಡಲಾಗಿದೆ. ಆದರೂ, ಘಟನೆಯಲ್ಲಿ ಯಾರ ಜೀವಕ್ಕೂ ಹಾನಿಯಾಗಿಲ್ಲ.

ಸೋಮವಾರವಷ್ಟೇ ಕೊಯಿಲಾಂಡಿಯಲ್ಲಿರುವ ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ದೇಶೀಯ ನಿರ್ಮಿತ ಬಾಂಬ್​ಗಳನ್ನು ಎಸೆಯಲಾಗಿತ್ತು. ಅದೇ ವೇಳೆ ಕಣ್ಣೂರಿನಲ್ಲಿ ಸುಮಾರು 18 ಕಚ್ಚಾ ಬಾಂಬ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಬಿಂದು ಮತ್ತು ಕನಕದುರ್ಗ ಎಂಬ ಮಧ್ಯವಯಸ್ಕ ಮಹಿಳೆಯರು ಕಳೆದ ಬುಧವಾರ ಅಯ್ಯಪ್ಪ ದೇವಸ್ಥಾನವನ್ನು ಪ್ರವೇಶಿಸಿ ದರ್ಶನ ಪಡೆದು ಬಂದಿದ್ದರು. ಇದಾದ ಬಳಿಕ ಕೇರಳ ರಾಜ್ಯಾದ್ಯಂತ ಭುಗಿಲೆದ್ದಿರುವ ಹಿಂಸಾಚಾರ ಇನ್ನೂ ಕಡಿಮೆ ಆಗಿಲ್ಲ.

ಶಬರಿಮಲೆ ಹಿಂಸಾಚಾರ ಸಂಬಂಧ ಇದುವರೆಗೂ 2,187 ಪ್ರಕರಣ ದಾಖಲಾಗಿದ್ದು, 6,914 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು​ ತಿಳಿಸಿವೆ. (ದಿಗ್ವಿಜಯ ನ್ಯೂಸ್​)