ನಿಪ್ಪಾಣಿ: ಕೋಟಿ ರೂ. ವೆಚ್ಚದಲ್ಲಿ ಗುರು ಭವನ ನಿರ್ಮಾಣ

ನಿಪ್ಪಾಣಿ: ತಾಲೂಕಿನ ಶಿಕ್ಷಕರ ಕನಸಾಗಿರುವ ಗುರುಭವನವನ್ನು ನಗರದಲ್ಲಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸುಮಾರು 1 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಮರಾಠಾ ಮಂಡಳ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದಿಂದ 11 ಲಕ್ಷ ರೂ. ಅನುದಾನ ಬಿಡುಗಡೆಯಾಗಲಿದೆ. ಜೊಲ್ಲೆ ಉದ್ಯೋಗ ಸಮೂಹದಿಂದ 5 ಲಕ್ಷ ರೂ. ನೀಡಲಾಗುವುದು ಹಾಗೂ ಅಂದಾಜು 1.31 ಕೋಟಿ ರೂ. ವೆಚ್ಚದಲ್ಲಿ ಗುರುಭವನ ನಿರ್ಮಾಣ ಮಾಡಲಾಗುವುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಆದರ್ಶ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಆದ್ದರಿಂದ ಅವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು. ಎಲ್ಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸ್ಥಳೀಯ ತಾಲೂಕು ಘಟಕದ ಅಧ್ಯಕ್ಷ ವಿನಾಯಕ ಗುರವ ಮಾತನಾಡಿ, ವರ್ಗಾವಣೆ ಪ್ರಕ್ರಿಯೆಯಲ್ಲಿ ಶಿಕ್ಷಕರಿಗೆ ಅನ್ಯಾಯವಾಗುತ್ತಿದ್ದು, ಇದನ್ನು ಹೋಗಲಾಡಿಸುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಕನ್ಹೇರಿಯ ಸಿದ್ಧಗಿರಿಮಠದ ಮುಪ್ಪಿನ ಕಾಡಸಿದ್ಧೇಶ್ವರ, ಸ್ಥಳೀಯ ವಿರೂಪಾಕ್ಷಲಿಂಗ ಸಮಾಮಠದ ಪ್ರಾಣಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಮತ್ತು ಆದರ್ಶ ಶಿಕ್ಷಕರನ್ನು, ಉತ್ಕೃಷ್ಟ ಶಾಲೆಗಳು ಹಾಗೂ ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಗಣ್ಯರಿಂದ ಸತ್ಕರಿಸಲಾಯಿತು.

ಕನ್ಹೇರಿಮಠದ ಚಿದಾನಂದ ಸ್ವಾಮೀಜಿ, ತಹಸೀಲ್ದಾರ್ ಪ್ರಕಾಶ ಗಾಯಕವಾಡ, ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಕೆ. ಸನ್ಮೂರಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕೆ.ಬಿ. ತಳವಾರ, ಜಿಪಂ ಸದಸ್ಯ ಸಿದ್ದು ನರಾಟೆ, ನಗರಸಭೆ ಸದಸ್ಯ ಜಯವಂತ ಭಾಟಲೆ, ರಾಜು ಗುಂಡೇಶಾ, ಸಂತೋಷ ಸಾಂಗಾವಕರ, ಮೊದಲಾದವರು ಉಪಸ್ಥಿತರಿದ್ದರು.

ಬಿಇಒ ಕೆ. ರಾಮನಗೌಡ ಸ್ವಾಗತಿಸಿದರು. ಬಿ.ಎಸ್. ಮಗದುಮ ನಿರೂಪಿಸಿದರು. ಪಿ.ಎಂ. ಮಕಾನದಾರ ವಂದಿಸಿದರು.

Leave a Reply

Your email address will not be published. Required fields are marked *