ಬೆಳೆ ಸಮೀಕ್ಷೆಗೆ ಮಳೆ, ನೆರೆ ಅಡ್ಡಿ

ಭರತ್ ಶೆಟ್ಟಿಗಾರ್ ಮಂಗಳೂರು

ರೈತರು ಬೆಳೆಯುವ ಬೆಳೆಗಳ ನಿಖರ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸರ್ಕಾರದ ಉದ್ದೇಶಿತ ಆ್ಯಪ್ ಆಧಾರಿತ ಬೆಳೆ ಸಮೀಕ್ಷೆಗೆ ಈ ಬಾರಿ ಮಳೆ-ನೆರೆ ಅಡ್ಡಿಯಾಗಿದೆ.

ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಕೊನೇ ಅವಧಿಯಲ್ಲಿ ರಾಜ್ಯದಲ್ಲಿ 90 ಕೋಟಿ ರೂ.ವೆಚ್ಚದಲ್ಲಿ ಬೆಳೆ ಸರ್ವೇ ನಡೆಸಲು ಸಂಪುಟ ಸಭೆಯಲ್ಲಿ ನಿರ್ಣಯವಾಗಿತ್ತು. ಅದರಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆ.15 ನಂತರ ಸರ್ವೇ ಆರಂಭವಾಗಬೇಕಿತ್ತು. ಆದರೆ ಜುಲೈ ಆರಂಭದಿಂದಲೇ ಜಿಲ್ಲೆಯಲ್ಲಿ ಮಳೆ ವಾತಾವರಣ ಕಂಡು ಬಂದು ಬಳಿಕ ಭಾರಿ ಮಳೆ, ಪ್ರವಾಹ, ನೆರೆ ಬಂದ ಹಿನ್ನೆಲೆಯಲ್ಲಿ ಸರ್ವೇ ಕುರಿತ ಪೂರ್ವ ಪ್ರಕ್ರಿಯೆ ವಿಳಂಬವಾಯಿತು. ಭತ್ತ ಕಟಾವಿಗೂ ಮುನ್ನ ಸಮೀಕ್ಷೆ ನಡೆಯಬೇಕಾಗಿರುವುದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಸಮೀಕ್ಷೆ ಆರಂಭಿಸಲೇಬೇಕಿದೆ. ಜಿಲ್ಲೆಯಲ್ಲಿ ಈ ಬಾರಿ ಮಳೆಯಿಂದ ನೆರೆ ಬಂದು ಸಾಕಷ್ಟು ಬೆಳೆ ಹಾನಿಯಾಗಿದ್ದು, ಇದರ ಪ್ರಮಾಣವೂ ನಿಖರವಾಗಿ ಸಮೀಕ್ಷೆ ಮೂಲಕ ತಿಳಿಯಲು ಸಾಧ್ಯವಿದೆ.

ಅವಿಭಜಿತ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಂಡು ಭೂಮಿಗಳೇ ಇರುವುದರಿಂದ ಆರ್‌ಟಿಸಿಗಳ ಸಂಖ್ಯೆಯೂ ಹೆಚ್ಚಿದೆ. ಉಡುಪಿ ಜಿಲ್ಲೆಯಲ್ಲಿ ಸಮೀಕ್ಷೆಗಾಗಿ 267 ಕಂದಾಯ ಗ್ರಾಮಗಳಲ್ಲಿ ಸರ್ವೇ ಕಾರ್ಯಕ್ಕೆ 9 ಲಕ್ಷಕ್ಕೂ ಅಧಿಕ ಪ್ಲಾಟ್‌ಗಳನ್ನು ಗುರುತಿಸಲಾಗಿದ್ದು, ದ.ಕ. ಜಿಲ್ಲೆಯ 442 ಕಂದಾಯ ಗ್ರಾಮಗಳಲ್ಲಿ 12 ಲಕ್ಷಕ್ಕೂ ಅಧಿಕ ಪ್ಲಾಟ್‌ಗಳಿವೆ.

ಆ್ಯಪ್ ಬಳಕೆ ತರಬೇತಿ: ಬೆಳೆ ಸಮೀಕ್ಷೆಗಾಗಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಯುವಕ ಯುವತಿಯರನ್ನು ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಕಳೆದ ಬಾರಿಯೂ ಮೀಟರ್ ರೀಡರ್, ಪಿಗ್ಮಿ ಸಂಗ್ರಹಿಸುವವರ ಮೂಲಕರ ಸರ್ವೇ ನಡೆಸಿತ್ತು. ಸರ್ವೇಗೂ ಮುನ್ನ ಆ್ಯಪ್ ಬಳಕೆ ಕುರಿತಂತೆ ತರಬೇತಿ ನಡೆಯಬೇಕಿದೆ. ಗ್ರಾಮ ಲೆಕ್ಕಿಗರ ಮೂಲಕ ಒಂದು ಸಮೀಕ್ಷೆಗೆ 10 ರೂ. ದೊರೆಯಲಿದ್ದು, ದಿನಕ್ಕೆ 50 ಪ್ಲಾಟ್ ಸಮೀಕ್ಷೆ ಮಾಡಿದರೆ 500 ರೂ. ವರೆಗೆ ದುಡಿಯಬಹುದು ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು.

ಸಮೀಕ್ಷೆ ಉದ್ದೇಶ:
ಯಾವ ಬೆಳೆ ಎಷ್ಟು ವಿಸ್ತಾರ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ? ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ? ಸರ್ಕಾರ ಏನು ಕ್ರಮ ಕೈಗೊಳ್ಳಬಹುದು ಎಂದು ಅಂದಾಜಿಸಲು ಹಾಗೂ ಯಾವ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದು ನಿರ್ಧಾರ ಕೈಗೊಳ್ಳಲು ಈ ಬೆಳೆ ಸಮೀಕ್ಷೆ ಸಹಕಾರಿ. ರೈತರು ಬೆಳೆದ ಬೆಳೆಯ ಬಗ್ಗೆ ಪ್ರಾಯೋಗಿಕವಾಗಿ ಕೆಲವು ಗ್ರಾಮೀಣ ಭಾಗದಲ್ಲಿ ತುಲನೆ ಮಾಡಿದಾಗ ವಾಸ್ತವಕ್ಕೂ, ಅಂದಾಜಿಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿತ್ತು. ಇದನ್ನು ಗಮನಿಸಿ ಕಳೆದ ಎರಡು ವರ್ಷಗಳಿಂದ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. 2017ರಲ್ಲಿ ಪ್ರಾಯೋಗಿಕವಾಗಿ ಸಮೀಕ್ಷೆ ಆರಂಭಿಸಲಾಯಿತು. ಪ್ರಸ್ತುತ ಮೂರನೇ ವರ್ಷ ಸರ್ವೇ ನಡೆಯುತ್ತಿದೆ.

ಆಗಸ್ಟ್ 15ರ ನಂತರ ಸಮೀಕ್ಷೆ ನಡೆಸಲು ಉದ್ದೇಶಿಲಾಗಿತ್ತು. ಆದರೆ ಜಿಲ್ಲೆಯಲ್ಲಿ ಭಾರಿ ಮಳೆಯಾಗಿ ನೆರೆ ಬಂದ ಪರಿಣಾಮ ತಡವಾಗಬಹುದು. ಜಿಲ್ಲಾಧಕಾರಿ ಆದೇಶ ನಂತರ ಸಮೀಕ್ಷೆ ಆರಂಭಿಸಲಾಗುವುದು.
– ಡಾ.ಕೆಂಪೇಗೌಡ, ಉಡುಪಿ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ

ಮುಂಗಾರು ಬೆಳೆ ಸಮೀಕ್ಷೆ ಮುಂದಿನ ತಿಂಗಳು ಆರಂಭವಾಗುವ ಸಾಧ್ಯತೆಯಿದೆ. ಭತ್ತ ಕಟಾವಿಗೆ ಮುನ್ನ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ನಡೆಸುವವರಿಗೆ ತರಬೇತಿಯೂ ಇನ್ನಷ್ಟೇ ನೀಡಬೇಕಿದ್ದು, ಶೀಘ್ರದಲ್ಲಿ ಆರಂಭವಾಗಿದೆ.
– ಡಾ.ಸೀತಾ, ದ.ಕ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ

Leave a Reply

Your email address will not be published. Required fields are marked *