ಇಂಡಿ: ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಶೇಂಗಾ, ಜೋಳ, ಕಡಲೆ, ಗೋಧಿ, ಕಬ್ಬು ಮತ್ತು ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ದ್ರಾಕ್ಷಿ, ಲಿಂಬೆ, ಬದನೆ ಮತ್ತು ಮೆಣಸಿನಕಾಯಿ ಬೆಳೆಗಳ ನಿರ್ವಹಣೆ ಕ್ರಮಗಳನ್ನು ಅನುಸರಿಸಲು ವಿಜ್ಞಾನಿ ಡಾ.ಹೀನಾ ಎಂ.ಎಸ್.ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿಂಗಾರು ಹಂಗಾಮಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಕಂಡುಬರುವ ರೋಗ ಮತ್ತು ಕೀಟ ಬಾಧೆಗಳ ಸಮಗ್ರ ನಿರ್ವಹಣೆ ಕುರಿತು ರೈತರು ಹಾಗೂ ವಿಜ್ಞಾನಿಗಳ ಸಂವಾದ ಮತ್ತು ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸೂಕ್ತ ಸಮಯದಲ್ಲಿ ಸೂಕ್ತ ನಿರ್ವಹಣೆ ಕೈಗೊಂಡರೆ ಉತ್ಪಾದನೆ ವೆಚ್ಚ ಗಣನೀಯವಾಗಿ ಕಡಿಮೆ ಆಗುವುದು. ಉತ್ತಮ ಇಳುವರಿಯೊಂದಿಗೆ ಪಡೆದುಕೊಳ್ಳಬಹುದಾಗಿದೆ ಎಂದರು.
ಹಿರಿಯ ವಿಜ್ಞಾನಿ, ಕೆವಿಕೆ ಮುಖ್ಯಸ್ಥ ಡಾ. ಶಿವಶಂಕರಮೂರ್ತಿ ಮಾತನಾಡಿ, ರೈತರು ಚರ್ಚಾಗೋಷ್ಠಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಬೆಳೆಗಳಲ್ಲಿ ಕಂಡುಬರುವ ರೋಗ ಮತ್ತು ಕೀಟ ಬಾಧೆಗಳ ಕುರಿತು ಮಾಹಿತಿ ಪಡೆದರು.
ಡಾ. ಬಾಲಾಜಿ ಡಿ. ನಾಯ್ಕ, ಡಾ. ಪ್ರೇಮ್‌ಚಂದ್ ಯು. ಮಾತನಾಡಿ, ಕಬ್ಬು, ಗೋಧಿ, ಜೋಳ ಮತ್ತು ಶೇಂಗಾ ಬೆಳೆಗಳಲ್ಲಿ ಕಂಡುಬರುವ ಇಟ್ಟಂಗಿ-ತುಕ್ಕು ರೋಗ, ಕಡಲೆ ಬೆಳೆಯಲ್ಲಿ ಕಾಯಿ ಕೊರಕ, ಜೋಳದಲ್ಲಿ ಸೈನಿಕ ಹುಳು, ಕಬ್ಬಿನಲ್ಲಿ ಹಿಟ್ಟು ತಿಗಣೆ ಬಾಧೆ, ಈರುಳ್ಳಿಯಲ್ಲಿ ನುಸಿ ಮತ್ತು ನೇರಳೆ ಮಚ್ಚೆ ರೋಗದ ಬಾಧೆ, ಲಿಂಬೆಯಲ್ಲಿ ಸೊರಗು ರೋಗ, ಸುರುಳಿ ಪೂಚಿ ಕೀಟ ಮತ್ತು ಹಿಟ್ಟು ತಿಗಣೆ ಬಾಧೆ, ದಾಳಿಂಬೆ ಬೆಳೆಯಲ್ಲಿ ಕಜ್ಜಿ ಮತ್ತು ಸೊರಗು ರೋಗ ಬಾಧೆ, ದ್ರಾಕ್ಷಿಯಲ್ಲಿ ಬೂದಿ ಮತ್ತು ಬೂಜು ತುಪ್ಪಟ ರೋಗ ಬಾಧೆ, ಬದನೆ ಮತ್ತು ಮೆಣಸಿನ ಬೆಳೆಯಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುವ ಕುಡಿ ಮತ್ತು ಕಾಯಿ ಕೊರಕ, ಥ್ರಿಪ್ಸ್ ಮತ್ತು ನುಸಿ ರೋಗ ಬಾಧೆಯ ಕುರಿತು ದೀರ್ಘ ಚರ್ಚೆ ಮಾಡಿದರು.
ರೈತರಾದ ಅನಿಲ ಕುಮಾರ ಮೊಹಾರೆ, ಭೀಮನಗೌಡ ಪಾಟೀಲ್, ಸೋಮಣ್ಣ ಕರೂರ, ಎಂ.ಎಲ್.ದೇವರ ಅಭಿಪ್ರಾಯ ಹಂಚಿಕೊಂಡರು. 55ಕ್ಕೂ ಹೆಚ್ಚು ರೈತ ಭಾಗವಹಿಸಿದ್ದರು.