ಬೆಳೆ ರಾಶಿಗೆ ಸಮಸ್ಯೆಯಾದ ಮಳೆ !

|ಮಂಜುನಾಥ ಕೋಳಿಗುಡ್ಡ ಬೆಳಗಾವಿ

ನೆರೆ ಸಮಸ್ಯೆಯಿಂದ ಹೊರ ಬರುವ ಮುನ್ನವೇ ಮಳೆರಾಯ ರೈತರಿಗೆ ಗಾಯದ ಮೇಲೆ ಬರೆ ಎಳೆದಿದ್ದಾನೆ. ಮತ್ತೊಂದೆಡೆ ಕಟಾವಿಗೆ ಸಜ್ಜಾಗಿದ್ದ ಬೆಳೆಗಳೆಲ್ಲ ಜಲಾವೃತಗೊಂಡಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ನದಿಗಳ ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಹಾನಿಯ ಗಾಯ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಕಳೆದ ನಾಲ್ಕೆದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಶೇಂಗಾ, ಸೋಯಾ ಅವರೆ, ಉದ್ದು, ಈರುಳ್ಳಿ ಬೆಳೆಗಳ ರಾಶಿಗೆ ತಡೆವೊಡ್ಡಿದೆ. ಮತ್ತೊಂದೆಡೆ ಹೂ ಬಿಡುತ್ತಿರುವ ತೊಗರಿ, ತೆನೆ ಕಟ್ಟುತ್ತಿರುವ ಮೆಕ್ಕೆಜೋಳ, ಹತ್ತಿ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಉಂಟಾದ ಅತಿವೃಷ್ಟಿಯಿಂದ ಭತ್ತ, ಗೋವಿನ ಜೋಳ, ಹೆಸರು, ಸೋಯಾ ಅವರೆ, ಶೇಂಗಾ, ಹತ್ತಿ, ಕಬ್ಬು ಇತರ ಬೆಳೆಗಳು ಸೇರಿ 2.21 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ವೇಳೆ ಅಳಿದು ಉಳಿದು ರಾಶಿಗೆ ಸಜ್ಜಾಗಿದ್ದ ಬೆಳೆಗಳಿಗೆ ಮಳೆ ಅಡ್ಡಿಯಾಗಿದೆ. ಇದರಿಂದ ಸುಮಾರು 56 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ಬೆಳೆಗಳ ರಾಶಿಗೆ ಸಮಸ್ಯೆ ಉಂಟಾಗಿದ್ದು, ಮಳೆ ಬಿಡುವು ಕೊಡದಿದ್ದರೆ ಬೆಳೆಗಳೆಲ್ಲ ಮತ್ತೆ ಜಲಾವೃತಗೊಂಡು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗೋಕಾಕ, ಸವದತ್ತಿ, ರಾಮದುರ್ಗ, ಬೈಲಹೊಂಗಲ, ಮೂಡಲಗಿ, ಹುಕ್ಕೇರಿ, ರಾಯಬಾಗ ತಾಲೂಕು ಸೇರಿ ವಿವಿಧ ಭಾಗಗಳಲ್ಲಿನ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ ರೈತರು ಕಿತ್ತು ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಇದೀಗ ನಾಲ್ಕೆದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಈರುಳ್ಳಿ ಭೂಮಿಯಲ್ಲಿ ಕೊಳೆತು ನಾರುತ್ತಿದೆ. ಈರುಳ್ಳಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತಿದೆ. ಮಳೆಗೆ ತೊಯ್ದಿವೆ ಎಂಬ ಕಾರಣಕ್ಕೆ ಈರುಳ್ಳಿ ದರದಲ್ಲಿ ಭಾರಿ ಇಳಿಕೆಯಾಗುತ್ತಿದೆ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾದ್ಯಂತ ರೈತರಲ್ಲಿ ಆತಂಕ ಸೃಷ್ಟಿಸಿದ ಮಳೆ

2018-19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 6.99 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಗೋವಿನ ಜೋಳ, ಹೆಸರು, ಸೋಯಾ ಅವರೆ, ಶೇಂಗಾ, ಹತ್ತಿ, ಕಬ್ಬು ಇತರ ಬೆಳೆಗಳು ಬಿತ್ತನೆಯಾಗಿತ್ತು. ಅತಿವೃಷ್ಟಿಯಿಂದ 2.21 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿನ ಶೇಂಗಾ, ಮೆಕ್ಕೆಜೋಳ, ಸಜ್ಜೆ , ಸೋಯಾ ಅವರೆ ಸೇರಿ ಇನ್ನಿತರ ಬೆಳೆಗಳನ್ನು ರಾಶಿ ಮಾಡಲು ರೈತರು ಸಜ್ಜಾಗಿದ್ದರು. ಆದರೆ, ಇದೀಗ ಮತ್ತೆ ಮಳೆ ಸುರಿಯುತ್ತಿರುವುದು ರೈತರಲ್ಲಿ ಅತಂಕ ಉಂಟು ಮಾಡಿದೆ.


ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದರಿಂದ ಹಿಂಗಾರು ಬಿತ್ತನೆಗೆ, ಕಬ್ಬು ನಾಟಿ ಮಾಡಿದವರಿಗೆ ಮಳೆ ಅನುಕೂಲವಾಗಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಕಟಾವಿಗೆ ಬಂದಿದ್ದರಿಂದ ಸಮಸ್ಯೆ ಉಂಟಾಗಿದೆ. ಭೂಮಿಯಲ್ಲಿಯೇ ಬೆಳೆಗಳು ಇದ್ದರೆ ಸಮಸ್ಯೆ ಇಲ್ಲ. ಕಟಾವು ಮಾಡಿ ಕಣದಲ್ಲಿ ಹಾಕಿದ್ದರೆ ಸ್ವಲ್ಪ ಸಮಸ್ಯೆ ಆಗಲಿದೆ. ಈ ಮಳೆಯಿಂದ ಬೆಳೆ ಹಾನಿ ಉಂಟಾದರೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗುವುದು.
|ಜಿಲಾನಿ ಮೊಕಾಶಿ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ

Leave a Reply

Your email address will not be published. Required fields are marked *