ಕೇಂದ್ರದಿಂದ ಜಿಲ್ಲೆಗೆ 1,379 ಕೋಟಿ ರೂ. ಅನುದಾನ

ಚಿಕ್ಕಮಗಳೂರು:ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಕೇಂದ್ರದಿಂದ ಜಿಲ್ಲೆಯ ಅಭಿವೃದ್ಧಿಗೆ 1,379 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಸಿಆರ್​ಎಫ್​ನಿಂದ 314 ಕೋಟಿ ರೂ. ಅನುದಾನ ಬಂದಿದ್ದು, 2017-18ನೇ ಸಾಲಿನ ಕಾಮಗಾರಿ ಪ್ರಗತಿಯಲ್ಲಿವೆ. 18-19ನೇ ಸಾಲಿನ ಯೋಜನೆಗೆ ಲೋಕೋಪಯೋಗಿ ಇಲಾಖೆ ಟೆಂಡರ್ ಕರೆಯಬೇಕಿದೆ. ಈ ಸಂಬಂಧ ಸಚಿವ ರೇವಣ್ಣ ಅವರ ಗಮನ ಸೆಳೆಯಲಾಗಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದಲೂ ಒತ್ತಡ ತರಲು ಪ್ರಯತ್ನಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಗೆ ಪಿಎಂಜಿಎಸ್​ವೈಯಡಿ 36 ಕೋಟಿ ರೂ, ಪಂಡಿತ್ ದೀನ ದಯಾಳ್ ಉಪಾಧ್ಯಾಯ ವಿದ್ಯುತ್ ಯೋಜನೆಯಡಿ 146, ನಗರ ವಿದ್ಯುದ್ದೀಕರಣ ಯೋಜನೆಯಡಿ ಟ್ರಾನ್ಸ್​ಫಾರ್ಮರ್ ಹಾಗೂ ಮಾರ್ಗ ಮೇಲ್ದರ್ಜೆಗೇರಿಸಲು 2.59. ಎನ್​ಆರ್​ಇಜಿಯಡಿ 150, ಶಿಕ್ಷಣ ಇಲಾಖೆಗೆ 18, ಮಾಧ್ಯಮಿಕ ಶಿಕ್ಷಣ ಯೋಜನೆಯಡಿ 45, ಅಮೃತ್ ಯೋಜನೆಯಡಿ 136, ಸ್ವಚ್ಛಭಾರತ್ ಯೋಜನೆಯಡಿ ಶೌಚಗೃಹ ನಿರ್ವಣಕ್ಕೆ 64 ಕೋಟಿ ರೂ., ಚಿಕ್ಕಮಗಳೂರು, ತರೀಕೆರೆಯಲ್ಲಿ ಹೊಸ ಅಂಚೆ ಕಚೇರಿ ನಿರ್ವಿುಸಲು 2.86, ಮುದ್ರಾ ಯೋಜನೆಯಡಿ 141 ಕೋಟಿ ರೂ. ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

ಜನ್​ಧನ್ ಯೋಜನೆಯಡಿ 1.51 ಲಕ್ಷ ಖಾತೆ ತೆರೆಯಲಾಗಿದೆ. ಪ್ರಧಾನ ಮಂತ್ರಿ ಜೀವನ್​ಜ್ಯೋತಿ ಯೋಜನೆಯಡಿ 57 ಸಾವಿರ ಮಂದಿ, ಪ್ರಧಾನಿ ಸುರಕಾ ್ಷೊಜನೆಯಡಿ 1 ಲಕ್ಷಕ್ಕೂ ಅಧಿಕ ಮಂದಿ ಲಾಭ ಪಡೆದಿದ್ದಾರೆ. ಉಜ್ವಲ ಯೋಜನೆಯಡಿ ಜಿಲ್ಲೆಯ 27,254 ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ದೊರಕಿದೆ. ಜಿಲ್ಲೆಯಲ್ಲಿ 12 ಜನೌಷಧ ಕೇಂದ್ರ ತೆರೆಯಲಾಗಿದೆ. ಅಟಲ್ ಟಿಂಕರಿಂಗ್ ಲ್ಯಾಬ್ ಕಾರ್ಯಕ್ರಮದಡಿ 46 ಕಾಲೇಜುಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬೆಳೆನಷ್ಟದ ನೆರವು ಕೊಡಿಸಲು ಯತ್ನ: ಕಾಫಿ, ಅಡಕೆ, ಮೆಣಸು ಬೆಳೆಗಾರರು ಸಂಕಷ್ಟದಲ್ಲಿದ್ದು ಅವು ಅನುತ್ಪಾದಕ ವಲಯ (ಎನ್​ಪಿಎ) ಎನಿಸುವುದನ್ನು ತಪ್ಪಿಸಲು 5 ವರ್ಷ ಸಾಲ ನವೀಕರಣಗೊಳಿಸಲು ಕೇಂದ್ರ ನಿರ್ಧರಿಸಿದ್ದು ಸದ್ಯದಲ್ಲೇ ಜಾರಿಯಾಗಲಿದೆ. ಸಣ್ಣ ಕಾಫಿ ಬೆಳೆಗಾರರಿಗೆ ತಕ್ಷಣ 20 ಕೋಟಿ ರೂ. ಸಹಾಯಧನ ಹಾಗೂ ದೊಡ್ಡ ಬೆಳೆಗಾರರ ಸಹಾಯಧನ ಮುಂದಿನ ತಿಂಗಳು ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಅತೀವೃಷ್ಟಿಯಿಂದ ಜಿಲ್ಲೆಯಲ್ಲಿ ಶೇ.30ರಷ್ಟು ಕಾಫಿ ಬೆಳೆ ನಾಶವಾಗಿದೆ ಎಂದು ಮಂಡಳಿ ವರದಿ ಸಲ್ಲಿಸಿದೆ. ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಬೆಳೆನಷ್ಟಕ್ಕೆ ನೆರವು ಕೊಡಿಸಲು ಯತ್ನಿಸಲಾಗುವುದು. ಸಾರ್ಕ್ ಒಪ್ಪಂದದ ಹೆಸರಲ್ಲಿ ಅನ್ಯ ದೇಶಗಳ ಕಾಳುಮೆಣಸು ದೇಶದ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಕಡಿಮೆಯಾಗುತ್ತದೆ. ಕಳಪೆ ಕಾಳುಮೆಣಸು ಅಮದು ತಡೆಗೆ ಪ್ರಯತ್ನಿಸಲಾಗುವುದು ಎಂದರು.

ಆತಂಕ ಪಡುವ ಅಗತ್ಯವಿಲ್ಲ: ಕಸ್ತೂರಿರಂಗನ್ ವರದಿ ವಿಚಾರವು ರಾಷ್ಟ್ರೀಯ ಹಸಿರುಪೀಠದ ಮುಂದಿದೆ. ಆದರೂ ರೈತರು ಈ ವಿಚಾರದಲ್ಲಿ ಆತಂಕ ಅಗತ್ಯವಿಲ್ಲ. ಭಾರೀ ಕೈಗಾರಿಕೆಗಳ ಸ್ಥಾಪನೆ ಹಾಗೂ ಗಣಿಗಾರಿಕೆಗೆ ಮಾತ್ರ ನಿಷೇಧವಿದೆ. ಇದು ಪಶ್ಚಿಮ ಘಟ್ಟದ ರೈತರಿಗೆ ಅನ್ವಯಿಸುವುದಿಲ್ಲ. ಈ ವಿಚಾರದಲ್ಲಿ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರತಿಭಟನೆ-ಹೇಳಿಕೆ ಮೂಲಕ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತುಂಬಾ ನಿಗಾ ವಹಿಸಿದ್ದು, ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.