ಹಿರೇಬಾಗೇವಾಡಿ: ರಾಜ್ಯಸರ್ಕಾರ ರೈತರ ಭಾವನೆಗಳೊಂದಿಗೆ ಚೆಲ್ಲಾಟವಾಡುವುದನ್ನು ಬಿಟ್ಟು ಕೂಡಲೇ ಬೆಳೆನಷ್ಟ ಪರಿಹಾರ ವಿತರಿಸಲಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಜಿಪಂ ಕೃಷಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶಂಕರ ಮಾಡಲಗಿ ಸಲಹೆ ನೀಡಿದರು.
ಹಿರೇಬಾಗೇವಾಡಿ ರೈತರ ಹೊಲಗಳಿಗೆ ಶುಕ್ರವಾರ ಭೇಟಿ ನೀಡಿ, ಅತಿವೃಷ್ಟಿಯಿಂದ ಹಾಳಾದ ಬೆಳೆ ಹಾನಿ ಪರಿಶೀಲಿಸಿ ಮಾತನಾಡಿದರು.
ಸರ್ಕಾರ ರೈತರು ಮೊಬೈಲ್ ಮೂಲಕ ಬೆಳೆ ಹಾನಿ ಸಮೀಕ್ಷೆ ಮಾಡುವಂತೆ ಹೇಳಿದೆ. ಆದರೆ, ಅದು ಎಷ್ಟು ರೈತರಿಂದ ಸಾಧ್ಯ? ಮೊಬೈಲ್ ಬಳಕೆ ಬಗ್ಗೆ ಅನೇಕ ರೈತರಿಗೆ ಗೊತ್ತಿಲ್ಲ. ಇನ್ನು, ರೈತರು ಬೆಳೆಹಾನಿ ಬಗ್ಗೆ ಮೊಬೈಲ್‌ನಲ್ಲಿ ಅಪ್‌ಲೋಡ್ ಮಾಡಿದ್ದನ್ನು ಯಾರು ಸರಿಯಾಗಿ ನೋಡುತ್ತಾರೆ? ರೈತರಿಗೆ ಹಾನಿ ಪರಿಹಾರ ಕೊಡುವುದನ್ನು ಬಿಟ್ಟು ಸರ್ಕಾರ ಸುಮ್ಮನೇ ಕಾಲ ಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ವಕ್ತಾರ ಶ್ರೀಶೈಲ ಡಗಲ್ಲ, ಬಸವರಾಜ ಧೂಳಪ್ಪನವರ, ರಾಜು ರೊಟ್ಟಿ, ನಿಂಗನಗೌಡ ದೊಡಗೌಡ್ರ, ನಿಂಗನಗೌಡ ಅಂಕಲಗಿ, ನಾಗನಗೌಡ ಅಂಕಲಗಿ, ಭೀಮಪ್ಪ ಮಾದುಭರಮಣ್ಣವರ, ಮಹಾಂತೇಶ ಅಮರಾಪುರ ಇತರರು ಇದ್ದರು.