ಕಾಡಾನೆ ದಾಳಿಗೆ ಅಡಕೆ, ಭತ್ತ ನಾಶ

ಎನ್.ಆರ್.ಪುರ: ಹೊನ್ನೇಕೊಡಿಗೆ ಗ್ರಾಪಂ ವ್ಯಾಪ್ತಿಯ ಸಾರ್ಯ ಗ್ರಾಮದ ಅಡ್ಡೆಟ್ಟಿ, ವರ್ಕಾಟೆಯ ಹಂಚುಕೊಡಿಗೆ, ಕೂಸಗಲ್ಲು, ಚಿನ್ನಕೊಡುಗೆ ಮತ್ತಿತರೆ ಊರುಗಳಲ್ಲಿ ಮೂರು ಕಾಡಾನೆಗಳು ಬೀಡುಬಿಟ್ಟಿದ್ದು ರಾತ್ರಿಯಾಗುತ್ತಿದ್ದಂತೆ ಅಡಕೆ, ಬಾಳೆ ತೋಟಗಳಿಗೆ, ಭತ್ತದ ಗದ್ದೆಗಳಿಗೆ ದಾಳಿ ಮಾಡಿ ನಷ್ಟ ಉಂಟುಮಾಡುತ್ತಿವೆ.

ಭದ್ರಾ ಹಿನ್ನೀರು ಕಡಿಮೆಯಾದ ಸಂದರ್ಭ ಭದ್ರಾ ಅಭಯಾರಣ್ಯದಿಂದ ಊರಿನ ಕಡೆಗೆ ನುಗ್ಗಿರುವ ಶಂಕೆಯಿದೆ. ಹಗಲು ದುಡನಕಲ್ಲು, ಮಂಗನಕಲ್ಲು, ಎತ್ತಿಮೆಕಲ್ಲು ಕಾಡಿನಲ್ಲಿ ಅಡಗುವ ಆನೆಗಳು ರಾತ್ರಿ ಗ್ರಾಮಕ್ಕೆ ನುಗ್ಗಿ ರೈತರ ಬೆಳೆ ಹಾಳು ಮಾಡುತ್ತಿವೆ. ರಾತ್ರಿ ವೇಳೆ ಆನೆಗಳನ್ನು ಓಡಿಸಲು ಪಟಾಕಿ ಸಿಡಿಸುತ್ತಿದ್ದಾರೆ. ಆದರೂ ಆನೆಗಳು ಹೆದರುತ್ತಿಲ್ಲ.

ಒಂದು ವಾರದಿಂದ ಆನೆ ಹಿಂಡು ಸಾರ್ಯ ಗ್ರಾಮದ ಅಡ್ಡೆಟ್ಟಿಯ ಯೋಗೇಂದ್ರ ಅವರ ತೋಟಕ್ಕೆ ನುಗ್ಗಿ 100 ಅಡಕೆ ಮರ, 2 ತೆಂಗಿನಮರ, ಸಪೋಟ ಗಿಡಗಳನ್ನು ಉರುಳಿಸಿವೆ. ಹಂಚುಕೊಡಿಗೆ ಜಯರಾಂ ಅವರ ಒಂದು ಎಕರೆ ಮತ್ತು ಅಡ್ಡೆಟ್ಟಿಯ ಗೋವಿಂದಸ್ವಾಮಿ ಅವರ ಅರ್ಧ ಎಕರೆ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಕೂಸಗಲ್ಲು ರಮೇಶ, ಮಹೇಶ, ಶ್ರೀನಿವಾಸ ಎಂಬುವರ ಅಡಕೆ ತೋಟ, ಭತ್ತದ ಗದ್ದೆ, ಅಡಕೆ ಸಸಿಗಳನ್ನು ಧ್ವಂಸ ಮಾಡಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಅರಣ್ಯ ಇಲಾಖೆ ಆನೆಗಳ ದಾಳಿ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಆನೆ ದಾಟದಂತೆ ಟ್ರಂಚ್ ನಿರ್ವಿುಸಬೇಕು. ಇಲ್ಲ ಐಬೆಕ್ಸ್ ಬೇಲಿ ನಿರ್ವಿುಸಿಕೊಡಬೇಕು. 20 ವರ್ಷಗಳಿಂದ ಕಷ್ಟಪಟ್ಟು ಬೆಳೆದ ಬೆಳೆಗಳು ಹಾನಿಯಾಗಿವೆ. ಇದಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು.

| ಯೋಗೇಂದ್ರ, ಅಡ್ಡೆಟ್ಟಿ ರೈತ