More

    ಕಾಸರಗೋಡು ಬೆಳೆ ವಿಮೆ ಜಿಲ್ಲೆ

    ಕಾಸರಗೋಡು: ರಾಜ್ಯದ ಪ್ರಥಮ ಸಂಪೂರ್ಣ ಬೆಳೆ ವಿಮೆ ಜಿಲ್ಲೆಯಾಗಿ ಕಾಸರಗೋಡನ್ನು ಆಯ್ಕೆ ಮಾಡಲಾಗಿದ್ದು, ಜ.9ರಂದು ಕೃಷಿ ಸಚಿವ ವಿ.ಎಸ್.ಸುನೀಲ್ ಕುಮಾರ್ ಅಧಿಕೃತವಾಗಿ ಘೋಷಿಸಲಿದ್ದಾರೆ. ಜುಲೈ 1ರಿಂದ 7ರವರೆಗೆ ರಾಜ್ಯಮಟ್ಟದ ಬೆಳೆ ವಿಮೆ ಸಪ್ತಾಹ ಆಚರಣೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಚಟುವಟಿಕೆ ಹೆಚ್ಚು ಗಮನ ಸೆಳೆದಿತ್ತು. ಈ ಮೂಲಕ ಜಿಲ್ಲೆಯಲ್ಲಿ ಕೃಷಿಯನ್ನೇ ಆಶ್ರಯಿಸಿ ಬದುಕು ಸಾಗಿಸುವ ಎಲ್ಲರಿಗೂ ಬೆಳೆಗಳನ್ನು ಯಥಾ ಸಮಯದಲ್ಲಿ ಆರ್ಥಿಕ ಸಹಾಯ ಮತ್ತು ವಿಮೆ ನಡೆಸಲು ಸಾಧ್ಯವಾಗಿತ್ತು. 2017-18ರ ವರ್ಷದಲ್ಲಿ 6286 ಮಂದಿ, 2018-19ನೇ ವರ್ಷ 5061 ಮಂದಿ ಸದಸ್ಯತ್ವ ಪಡೆದ ಈ ಯೋಜನೆಯಲ್ಲಿ 2018-19 ವರ್ಷದಲ್ಲಿ ಶೇ.100 ಮಂದಿ ಸದಸ್ಯರಾಗಿದ್ದಾರೆ.

    ಬರಗಾಲ, ನೆರೆ, ಭೂಕುಸಿತ, ಮಣ್ಣು ಕುಸಿತ, ಭೂಕಂಪ, ಕಡಲ್ಕೊರೆತ, ಸುಳಿಗಾಳಿ, ಸಿಡಿಲು, ಕಾಡ್ಗಿಚ್ಚು, ಕಾಡುಮೃಗಗಳ ಹಾವಳಿ ಸಹಿತ ವಿವಿಧ ವಿಕೋಪಗಳಿಂದ ಉಂಟಾಗುವ ನಷ್ಟಕ್ಕೆ ಸರ್ಕಾರದ ವತಿಯಿಂದ ಕೃಷಿಕರಿಗೆ ಈ ಸೌಲಭ್ಯ ಲಭಿಸಲಿದೆ. ಯೋಜನೆಯಲ್ಲಿ ಸೇರ್ಪಡೆಗೊಳ್ಳುವ ಕೃಷಿಕರಿಗೆ ಸರ್ಕಾರ ಆಯಾ ಸಮಯದಲ್ಲಿ ನಿಗದಿತ ಪ್ರೀಮಿಯಂ ಮೊತ್ತ ಪಾವತಿಸಬೇಕು. ಪ್ರೀಮಿಯಂ ಪಾವತಿಸಿದ ದಿನದಿಂದ 7 ದಿನಗಳ ಅನಂತರ ನಷ್ಟ ಪರಿಹಾರಕ್ಕೆ ಅರ್ಹತೆ ಲಭಿಸುತ್ತದೆ. 1995ರಲ್ಲಿ ರಾಜ್ಯದಲ್ಲಿ ಬೆಳೆ ವಿಮೆ ಯೋಜನೆ ಆರಂಭಿಸಲಾಗಿತ್ತು. 21 ವರ್ಷಗಳ ನಂತರ ಪರಿಷ್ಕೃತ ನಷ್ಟ ಪರಿಹಾರ ಮೊತ್ತ ಕೃಷಿಕರಿಗೆ ಲಭಿಸಲಿದೆ.

    ಲೀಸ್ ಪಡೆದವರೂ ಅರ್ಹರು: ವಿಮೆ ಸದಸ್ಯತ್ವಕ್ಕೆ ಸ್ವಂತವಾಗಿ, ಲೀಸ್‌ಗೆ ಜಾಗ ಪಡೆದು ನಡೆಸುವ ಕೃಷಿ ನಡೆಸುವವರು ಅರ್ಹರಾಗಿರುತ್ತಾರೆ. ಭತ್ತದ ಕೃಷಿಯಲ್ಲಿ ಪ್ರತಿ ಕೃಷಿಕನೂ ವೈಯಕ್ತಿಕ ಬೆಳೆ ವಿಮೆ ನಡೆಸಬೇಕು. ಆದರೆ ಸಾಮೂಹಿಕವಾಗಿ ಕೃಷಿ ನಡೆಸುವ ಗದ್ದೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಸಮಿತಿಗಳ ಕಾರ್ಯದರ್ಶಿ ಅಥವಾ ಅಧ್ಯಕ್ಷ ಹೆಸರಲ್ಲಿ, ಗುಂಪು ಹಿನ್ನೆಲೆಯಲ್ಲಿ ಸದಸ್ಯತನ ಪಡೆಯಬಹುದು. ಜಾಗ ಸಂದರ್ಶನ ನಡೆಸಿ ಪ್ರೀಮಿಯಂ ಮೊತ್ತ ಪರಿಶೀಲಿಸಿ, ಯೋಜನೆಗಾಗಿ ನೇಮಿಸಿದ ಏಜೆಂಟ್ ಮೂಲಕ ಗ್ರಾಮೀಣ ಬ್ಯಾಂಕ್ ಶಾಖೆ ಅಥವಾ ಸಹಕಾರಿ ಬ್ಯಾಂಕ್‌ಗಳಲ್ಲಿ ಪಾವತಿಸಬಹುದು. ಯೋಜನೆಯನ್ನು ಗರಿಷ್ಠ ಮಟ್ಟದಲ್ಲಿ ಕೃಷಿಕರಿಗೆ ತಲಪಿಸುವ ಮಟ್ಟಿಗೆ ಕೃಷಿ ಅಧಿಕಾರಿ ಸಿಬ್ಬಂದಿಗೆ ಸಾರ್ವಜನಿಕ ಮಾನದಂಡಗಳಿಗೆ ಅನುಗುಣವಾಗಿ ಏಜೆಂಟರನ್ನು ನೇಮಿಸುವರು. ಕೃಷಿಕರಿಗೆ, ಏಜೆಂಟರಿಗೆ ಪ್ರೀಮಿಯಂ ಪಾವತಿಸಿ ಕೃಷಿ ಭವನಕ್ಕೆ ರಶೀದಿ ಸಲ್ಲಿಸಬೇಕು.

     ಯಾವ ಬೆಳೆಗೆ ಲಭಿಸಲಿದೆ ವಿಮೆ?: ಬೆಳೆ ವಿಮೆ ಸಂರಕ್ಷಣೆ ಹೊಂದಿರುವ ಬೆಳೆಗಳ ಪರಿಹಾರ ಮೊತ್ತವನ್ನು 2017ರಿಂದ ಮರು ರಚಿಸಿ 12 ಪಟ್ಟು ಹೆಚ್ಚಿಸಲಾಗಿದೆ. ತೆಂಗು, ಅಡಕೆ, ಬಾಳೆ, ರಬ್ಬರ್, ಕರಿಮೆಣಸು, ಏಲಕ್ಕಿ, ಗೇರುಬೀಜ, ಅನನಾಸು, ಕಾಫಿ, ಶುಂಠಿ, ಚಹಾ, ಹಳದಿ, ಕೊಕ್ಕೊ, ಎಳ್ಳು, ತರಕಾರಿ, ವೀಳ್ಯದೆಲೆ, ಗೆಡ್ಡೆ-ಗೆಣಸು, ಹೊಗೆಸೊಪ್ಪು, ಭತ್ತ, ಮಾವಿನಕಾಯಿ, ಕಿರುಧಾನ್ಯಗಳು ಇತ್ಯಾದಿ ಬೆಳೆಗಳಿಗೆ ವಿಮೆ ಸಂರಕ್ಷಣೆಯಿದೆ. ರಾಜ್ಯದ ಎಲ್ಲ ಭತ್ತದ ಕೃಷಿಕರೂ ಈ ಯೋಜನೆಯ ಸದಸ್ಯರಾಗಿದ್ದಾರೆ. ಕೀಟಬಾಧೆಯಿಂದ ಭತ್ತದ ಕೃಷಿಗೆ ಉಂಟಾಗುವ ನಷ್ಟಕ್ಕೂ ವಿಮೆ ಸಂರಕ್ಷಣೆ ದೊರೆಯಲಿದೆ.

     ಅರ್ಜಿ ಸಲ್ಲಿಕೆ ಹೇಗೆ?: ನಾಶ- ನಷ್ಟ ಸಂಭವಿಸಿದ 15 ದಿನಗಳೊಳಗೆ ನಿಗದಿತ ಫಾರಂನಲ್ಲಿ ಕೃಷಿ ಭವನದಲ್ಲಿ ಅರ್ಜಿ ಸಲ್ಲಿಸಬೇಕು. ಕೃಷಿ ಭವನ ಸಿಬ್ಬಂದಿ ತಪಾಸಣೆ ನಡೆಸುವವರೆಗೆ ನಷ್ಟ ಸಂಭವಿಸಿದ ಬೆಳೆಯನ್ನು ಅದೇ ರೂಪದಲ್ಲಿರಿಸಬೇಕು. ಕೃಷಿ ಭವನಕ್ಕೆ ಅರ್ಜಿ ಸಲ್ಲಿಸಿದ ನಾಲ್ಕು ದಿನಗಳಲ್ಲಿ ಸಿಬ್ಬಂದಿ ನಷ್ಟ ಸಂಭವಸಿದ ಜಾಗಕ್ಕೆ ಆಗಮಿಸಿ ತಪಾಸಣೆ ನಡೆಸಿ, ಪ್ರಧಾನ ಕೃಷಿ ಅಧಿಕಾರಿಗೆ ವರದಿ ಸಲ್ಲಿಸುವರು. ಪ್ರೀಮಿಯಂ ಮತ್ತು ಪರಿಹಾರ 10 ತೆಂಗಿನ ಮರಗಳಿರುವ ಕೃಷಿಕನಿಗೆ ಒಂದು ತೆಂಗಿನಮರಕ್ಕೆ 2 ರೂ. ರೂಪದಲ್ಲಿ ಒಂದು ವರ್ಷಕ್ಕೆ, 5 ರೂ.ನಂತೆ ಮೂರು ವರ್ಷಗಳ ಕಾಲ ಪ್ರೀಮಿಯಂ ಪಾವತಿಸಬೇಕು. ಈ ಮೂಲಕ ತೆಂಗಿನ ಮರವೊಂದಕ್ಕೆ 2 ಸಾವಿರ ರೂ. ನಷ್ಟ ಪರಿಹಾರ ಲಭಿಸಲಿದೆ. 10 ಮರಗಳಿರುವ ಕರಿಮೆಣಸು ಕೃಷಿಕನಿಗೆ 1.50 ರೂ. ಒಂದು ವರ್ಷಕ್ಕೆ, ಮೂರು ರೂ. ಮೂರು ವರ್ಷದವರೆಗೆ ಪಾವತಿಸಿದರೆ ಮರವೊಂದಕ್ಕೆ 200 ರೂ. ಪರಿಹರ ಲಭಿಸಲಿದೆ. 25 ರಬ್ಬರ್ ಮರಗಳಿರುವ ಕೃಷಿಕನಿಗೆ ಮರವೊಂದಕ್ಕೆ ತಲಾ 3 ರೂ. ವರ್ಷಕ್ಕೆ, 7.50 ರೂ.ನಂತೆ ಮೂರು ವರ್ಷ ಪಾವತಿಸಿದರೆ ಮರವೊಂದಕ್ಕೆ ಒಂದು ಸಾವಿರ ರೂ. ನಷ್ಟ ಪರಿಹಾರ ಲಭಿಸಲಿದೆ. ಇದೇ ರೀತಿಯಲ್ಲಿ ವಿವಿಧ ಬೆಳೆಗಳಿಗೆ ಸಂರಕ್ಷಣೆ ಲಭಿಸಲಿದೆ. ದೀರ್ಘಾವಧಿ ಬೆಳೆಗಳಿಗೆ ಪ್ರತ್ಯೇಕ ಸಂರಕ್ಷಣೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts