ಶಿವಮೊಗ್ಗ: ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ವಿತರಣೆ ಅವೈಜ್ಞಾನಿಕವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ದೂರಿದರು.
50,383 ರೈತರು ಅಡಕೆ, ಶುಂಠಿ, ಕಾಳುಮೆಣಸಿಗೆ 2023-24ನೇ ಸಾಲಿನಲ್ಲಿ 22.60 ಕೋಟಿ ರೂ. ಕಂತು ಕಟ್ಟಿದ್ದರು. ಆದರೆ ವಿಮಾ ಸಂಸ್ಥೆ ಕೇವಲ 19,358 ರೈತರಿಗೆ 45.19 ಕೋಟಿ ರೂ. ವಿಮೆ ಪರಿಹಾರ ಪಾವತಿಸಿದೆ. ಪ್ರಸಕ್ತ ವರ್ಷ 62,887 ರೈತರು 26.73 ಕೊಟಿ ರೂ. ಬೆಳೆ ವಿಮೆ ಕಂತು ಪಾವತಿಸಿದ್ದು 19 ಸಾವಿರ ರೈತರಿಗೆ ಮಾತ್ರ ಪರಿಹಾರ ಸಿಕ್ಕಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಆಯ್ಕೆ ಮಾಡಿರುವ ವಿಮಾ ಸಂಸ್ಥೆ ಜಿಲ್ಲೆಯಲ್ಲಿ ಶಾಖೆಯನ್ನೇ ತೆರೆದಿಲ್ಲ. ಕೃಷಿ, ತೋಟಗಾರಿಕೆ ಇಲಾಖೆ, ಜಿಲ್ಲಾಧಿಕಾರಿ, ಜಿಪಂ ಸಿಇಒಗಳಿಗೂ ಬೆಳೆ ವಿಮೆ ಮಾಹಿತಿ ಸಿಗುತ್ತಿಲ್ಲ. ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ರಾಜ್ಯ ಮತ್ತು ಕೇಂದ್ರದ ಪಾಲಿದೆ. ವಿಮಾ ಸಂಸ್ಥೆಗಳು ಖುದ್ದು ಹಾನಿ ಪ್ರದೇಶಕ್ಕೆ ಹೋಗಲ್ಲ. ಬದಲಾಗಿ ಮಳೆ ಮಾಪನ ಆಧಾರದ ಮೇಲೆ ಪರಿಹಾರಕ್ಕೆ ಆಯ್ಕೆ ಮಾಡುತ್ತಿವೆ ಎಂದು ದೂರಿದರು.
ಹಾಲು ಉತ್ಪಾದಕರಿಗೆ ಯೋಜನೆ
ಜಿಲ್ಲೆಯಲ್ಲಿ 3 ಲಕ್ಷಕ್ಕಿಂತ ಅಧಿಕ ಡಿಸಿಸಿ ಬ್ಯಾಂಕ್ ಗ್ರಾಹಕರಿದ್ದು, ಈ ವರ್ಷದಿಂದಲೇ ಶಿಮುಲ್ (ಶಿವಮೊಗ್ಗ ಹಾಲು ಒಕ್ಕೂಟ) ಸಹಕಾರದೊಂದಿಗೆ ಹಾಲು ಉತ್ಪಾದಕರಿಗೆ ವಿಶೇಷ ಯೋಜನೆ ಜಾರಿಗೆ ತರಲಾಗುತ್ತಿದೆ. ಶೂನ್ಯ ಬ್ಯಾಲೆನ್ಸ್‌ನಡಿ ಡಿಸಿಸಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಎಟಿಎಂ, ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.