ಉತ್ತಮ ಫಸಲು ಪಡೆಯಲು ಬೆಳೆಗೆ ಸಾರಾಯಿ ಸಿಂಪಡಣೆ!

ಮೇರಠ್: ಕಡಿಮೆ ಅವಧಿಯಲ್ಲಿ ದೊಡ್ಡ ಗಾತ್ರದ ಆಲೂಗಡ್ಡೆ ಬೆಳೆಯಲು ಉತ್ತರ ಭಾರತದ ವಿವಿಧ ರಾಜ್ಯಗಳ ರೈತರು ಸಾರಾಯಿ ಸಿಂಪಡಿಸುತ್ತಿದ್ದಾರೆ! ಕಬ್ಬು ಮತ್ತಿತರ ಬೆಳೆಗಳಿಗೂ ಕೀಟನಾಶಕ ರೂಪದಲ್ಲಿ ಸಾರಾಯಿ ಬಳಸುತ್ತಿದ್ದಾರೆ.

ಒಂದು ಕ್ವಾರ್ಟರ್ ಸಾರಾಯಿಗೆ 50 ರೂ. ವೆಚ್ಚವಾಗುತ್ತದೆ. ಎಕರೆಗೆ ಒಂದು ಕ್ವಾರ್ಟರ್​ನಂತೆ 10 ಎಕರೆ ಭೂಮಿಗೆ 500 ರೂ. ವೆಚ್ಚವಾಗುತ್ತದೆ. ಇದರಿಂದ ಆಲೂಗಡ್ಡೆ ಗಾತ್ರ ಹೆಚ್ಚುವ ಜತೆಗೆ ಕಡಿಮೆ ಅವಧಿಯಲ್ಲಿ ಬೆಳೆ ಬರುತ್ತದೆ ಎಂದು ಬುಲಂಶಹರ್​ನ ಬೋಹಿಚ್ ಗ್ರಾಮದ ರೈತನೊಬ್ಬ ಹೇಳಿಕೊಂಡಿದ್ದಾನೆ.

ಮೊದಲು 1 ಗುಂಟೆ ಭೂಮಿಯಲ್ಲಿನ ಆಲೂಗಡ್ಡೆ ಬೆಳೆಗೆ ಸಾರಾಯಿ ಸಿಂಪಡಿಸಿದೆ. ಇನ್ನುಳಿದ 5 ಗುಂಟೆ ಭೂಮಿಯಲ್ಲಿದ್ದ ಆಲೂಗಡ್ಡೆ ಬೆಳೆಗೆ ಎಂದಿನಂತೆ ಗೊಬ್ಬರ ಮತ್ತು ಕೀಟನಾಶಕ ನೀಡಿದೆ. ಸಾರಾಯಿ ಸಿಂಪಡಿಸಿದ್ದ ಭಾಗದಲ್ಲಿನ ಆಲೂಗಡ್ಡೆಗಳು ಗಾತ್ರದಲ್ಲಿ ದಪ್ಪನಾಗಿದ್ದವು ಎಂದು ಬುಲಂದ್​ಶಹರ್​ನ ಜಮ್ಲಾಪುರ ಗ್ರಾಮದ ರೈತ ಜ್ಞಾನಿಸಿಂಗ್ ತಿಳಿಸುತ್ತಾರೆ.

ವಾದ ತಿರಸ್ಕರಿಸಿದ ತಜ್ಞರು

ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ರೈತರ ಹೇಳಿಕೆಗಳನ್ನು ಅಲ್ಲಗಳೆದಿದ್ದಾರೆ. ಆಲೂಗಡ್ಡೆ ಬೆಳೆಗೆ ಸಾರಾಯಿ ಸಿಂಪಡಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅದು ಕೇವಲ ಭ್ರಮೆ. ಮದ್ಯಸಾರದ ಯಥೇಚ್ಚ ಬಳಕೆಯಿಂದ ಮಣ್ಣಿನ ಆರೋಗ್ಯ ಹದಗೆಡುತ್ತದೆ ಎಂದು ಎಚ್ಚರಿಸುತ್ತಾರೆ. ಮದ್ಯಸಾರ ಬಳಕೆಯಿಂದ ಬೆಳೆ ಉತ್ತಮವಾಗಿ ಬರುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ಸುಳ್ಳುನಂಬಿಕೆಗಳಿಗಾಗಿ ರೈತರು ಅನಗತ್ಯ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಬುಲಂದ್​ಶಹರ್​ನ ಜಿಲ್ಲಾ ಕೃಷಿ ಅಧಿಕಾರಿ ಅಶ್ವಾನಿ ಕುಮಾರ್ ಸಿಂಗ್ ಹೇಳುತ್ತಾರೆ.