ಬೆಳಗಾವಿ: ಬೆಳೆ ಹಾನಿ ಪ್ರದೇಶಕ್ಕೆ ಭೇಟಿ, ಕ್ರಮಕ್ಕೆ ಸೂಚನೆ

ಐಗಳಿ: ಸೋಮವಾರ ಸಂಜೆ ಬೀಸಿದ ಅಕಾಲಿಕ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದ ಹಾನಿ ಸಂಭವಿಸಿದ ಅಥಣಿ ತಾಲೂಕಿನ ವಿವಿಧ ಗ್ರಾಮಗಳಿಗೆ ತಹಸೀಲ್ದಾರ್ ಎಂ.ಎನ್.ಬಳಗಾರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಹಾನಿಗೊಳಗಾದ ದ್ರಾಕ್ಷಿ ತೋಟ ಹಾಗೂ ಶೆಡ್‌ಗಳಲ್ಲಿ ಸಂಗ್ರಹಿಸಿದ್ದ ಒಣದ್ರಾಕ್ಷಿ ಕುರಿತು ಸರ್ವೇ ನಡೆಸಿ ವರದಿ ನೀಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿ ಅಶ್ವೀನಿ ಗಾನೂರಗೆ ಸೂಚಿಸಿದರು.

ನಂತರ ಐಗಳಿ ಗ್ರಾಮದಲ್ಲಿ ಹಾನಿ ಪರಿಶೀಲಿಸಿ ಮಾತನಾಡಿ, ಹಾನಿ ಸಂಬಂಧ ಸರ್ವೇ ಮಾಡಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಅಕಾಲಿಕ ಮಳೆಯಿಂದಾಗಿ ನೂರಾರು ರೈತರು ಬೆಳೆದ ದ್ರಾಕ್ಷಿ ಹಾಳಾಗಿದೆ. ಲಕ್ಷಾಂತರ ರೂ. ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ. ಅಧಿಕಾರಿಗಳು ಈ ಕುರಿತು ಪರಿಶೀಲಿಸಿ, ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಐಗಳಿಯ ಸಿ.ಎಸ್.ನೇಮಗೌಡ, ಕೋಹಳ್ಳಿಯ ಶ್ರೀಮಂತ ಮುಧೋಳ, ದಸ್ತಗೀರ ಕೊರಬು ಸೇರಿ ಹಲವು ಗ್ರಾಮಗಳ ರೈತರು ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.