ಕಲಶೇಶ್ವರ ಮಹಾರಥೋತ್ಸವದಲ್ಲಿ ಭಕ್ತಸಾಗರ

ಕಳಸ: ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ಇಲ್ಲಿಯ ಕಲಶೇಶ್ವರ ದೇವಾಲಯದಲ್ಲಿ ಶನಿವಾರ ಮಹಾರಥೋತ್ಸವ ವೈಭವದಿಂದ ನೆರವೇರಿತು.

ಕಳೆದ ಭಾನುವಾರ ಗಣಪತಿ ಪೂಜೆ ಅಂಕುರಾರ್ಪಣೆಯೊಂದಿಗೆ ಆರಂಭವಾದ ಜಾತ್ರಾ ಮಹೋತ್ಸವ ನಂತರದ ದಿನಗಳಲ್ಲಿ ಧ್ವಜಾರೋಹಣ, ವೃಷಭಾರೋಹಣ, ಕೌತುಕೋತ್ಸವ, ಸಿಂಹರೋಹಣ, ಮಯೂರಾರೋಹಣ, ಹಂಸಾರೋಹಣ, ಗಜಾರೋಹಣ ಮುಂತಾದ ಉತ್ಸವಗಳು ನಡೆದು ಶನಿವಾರ ಬೆಳಗ್ಗೆ ಬ್ರಹ್ಮ ರಥೋತ್ಸವ, ರಾತ್ರಿ ಶ್ರೀಮನ್ ಮಹಾರಥೋತ್ಸವ ನಡೆಯಿತು.

ತಳಿರು ತೋರಣಗಳಿಂದ ಗ್ರಾಮವನ್ನು ಸಿಂಗಾರ ಮಾಡಲಾಗಿತ್ತು. ಇಡೀ ದೇವಾಲಯ ವಿದ್ಯುದ್ದೀಪಗಳಿಂದ ಶೃಂಗಾರಗೊಂಡಿತ್ತು.ನಾಲ್ಕು ಕೂಡಿಗೆಗಳ ಮೂಲ ನಿವಾಸಿಗಳಾದ ಗಿರಿಜನ ಗೌಡಲು ಜನಾಂಗ ಸಿದ್ಧಪಡಿಸಿದ ಹೂಗಳಿಂದ ಶೃಂಗರಿಸಲ್ಪಟ್ಟ ಭವ್ಯ ಬ್ರಹ್ಮರಥದಲ್ಲಿ ಶ್ರೀ ಕಲಶೇಶ್ವರ ವಿರಾಜಮಾನ ಆಗುವುದನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದರು.

ಮಧ್ಯಾಹ್ನ 12ಕ್ಕೆ ಸ್ತುತಿ ಪಾಠಕರು ಸ್ತುತಿ ಪಠಿಸುತ್ತಾ ಛತ್ರಿ, ಚಾಮರ, ಮಂಗಳ ವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಹೊತ್ತು ತಂದರು. ಕಲಶೇಶ್ವರನನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ಪೂಜೆ ಮಾಡಲಾಯಿತು. ಆ ವೇಳೆ ಭಕ್ತಾದಿಗಳು ದೇವರಿಗೆ ಫಲಪುಷ್ಪಗಳನ್ನು ಅರ್ಪಿಸಿದರು. ತಾವು ಬೆಳೆದ ಕಾಫಿ, ಕಾಳುಮೆಣಸು, ಅಡಕೆ, ಏಲಕ್ಕಿ ಇನ್ನಿತರೆ ಧಾನ್ಯಗಳನ್ನು ರಥಕ್ಕೆ ಎಸೆದು ಹರಕೆ ತೀರಿಸಿದರು. ತೆಂಗಿನ ಕಾಯಿಯನ್ನು ರಥದ ಚಕ್ರಕ್ಕೆ ಒಡೆದು ಬ್ರಹ್ಮರಥವನ್ನು ಎಳೆದರು.

ರಾತ್ರಿ ಪಟ್ಟಣದ ರಾಜಬೀದಿಯಲ್ಲಿ ಶ್ರೀಮನ್ ಮಹಾರಥೋತ್ಸವ ನಡೆಯಿತು. ರಾಜಬೀದಿಯಲ್ಲಿ ಸಾಗುವಾಗ ಪಟಾಕಿ, ಸಿಡಿಮದ್ದುಗಳು, ವಾಲಗ, ವಿವಿಧ ವೇಷಭೂಷಣದ ವಿನೋದಾವಳಿಗಳು ಕಣ್ಣಿಗೆ ಹಬ್ಬ ತಂದುಕೊಟ್ಟವು.