More

  ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಿನ್ನೆಲೆ ಎಲ್ಲರಿಗೂ ಗೊತ್ತಿದೆ: ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ

  ಮಂಡ್ಯ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಹಾರಾಜರ ಕುಟುಂಬದಿಂದ ಬಂದವರು. ನಮ್ಮಪ್ಪ ಕೂಲಿ ಮಾಡುತ್ತಿದ್ದವರು, ಶಾಸಕ ರವಿಕುಮಾರ್ ಗಣಿಗ ತಂದೆ ಸಾರಿಗೆ ಸಂಸ್ಥೆ ನೌಕರರು. ಆದರೆ, ಅವರಿಗೆ ದೊಡ್ಡ ಗೌರವವಿದೆ ಎಂದು ಪುಟ್ಟರಾಜು ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
  ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಶಾಸಕ ರವಿಕುಮಾರ್ ಗಣಿಗ ವಿರುದ್ಧ ವಾಗ್ದಾಳಿ ನಡೆಸಿದ ಪುಟ್ಟರಾಜು ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಸ್ಪಿ 30 ವರ್ಷ ಆಡಳಿತ ಮಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದುಡಿದಿದ್ದಾರೆ. ಅವರನ್ನು ಬಿಟ್ಟರೆ ಬೇರೆ ಯಾರು ಏನೂ ಮಾಡಿಲ್ಲ. ಅವರ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಅವರು ಮಂತ್ರಿಯಾಗಿದ್ದಾಗ ಕೆಆರ್‌ಎಸ್‌ನಲ್ಲಿ 40 ಅಡಿ ನೀರು ಇದ್ದಾಗ ನೀರು ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ ಸಿಆರ್‌ಎಸ್, ರಾಜ್ಯ ಮತ್ತು ರೈತರ ಹಿತದೃಷ್ಟಿಯಿಂದ ಪಾದಯಾತ್ರೆ ಮಾಡಿಕೊಳ್ಳಲಿ. ನಾವು ಪಾದಯಾತ್ರೆ ಮಾಡಿದಾಗ ಟೀಕೆ ಮಾಡಿದ್ದರು. ಆದರೆ, ನಾವು ಟೀಕಿಸುವುದಿಲ್ಲ, ಪಾದಯಾತ್ರೆ ಮಾಡಲಿ ಎಂದರು.
  ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೂವರು ಅಭ್ಯರ್ಥಿಗಳು ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ. ನಮಗೆ ಯಾವುದೇ ಭಯವಿಲ್ಲ, ಚುನಾವಣೆಯನ್ನು ಸುಲಭವಾಗಿ ಗೆಲ್ಲುತ್ತೇವೆ. ನಮಗೆ ಯಾರ ಅವಶ್ಯಕತೆ ಇಲ್ಲದಿರುವುದರಿಂದ ಪ್ರತಿಪಕ್ಷ ಶಾಸಕರ ಬಳಿ ಮತಯಾಚಿಸಿಲ್ಲ. ರೆಸಾರ್ಟ್‌ನಲ್ಲಿ ಲೋಕಸಭೆ ಚುನಾವಣೆ ಗೆಲುವಿಗಾಗಿ ತಂತ್ರಗಾರಿಕೆ ರೂಪಿಸಲು ಚರ್ಚಿಸುವ ಸಲುವಾಗಿ ಶಾಸಕರೆಲ್ಲ ಸೇರುತ್ತಿದ್ದೇವೆ. ಅಷ್ಟಕ್ಕೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಅಗತ್ಯವಾದ ಸಂಖ್ಯೆ ನಮ್ಮಲ್ಲಿದೆ, ಒಬ್ಬ ಅಭ್ಯರ್ಥಿಗೆ ತಲಾ 45 ಮತ ದೊರೆತು ನಂತರವೂ ಹೆಚ್ಚುವರಿ ಮತ ಉಳಿಯಲಿವೆ. ಹಾಗಾಗಿ ಗೆಲುವಿನ ಬಗ್ಗೆ ಯಾವುದೇ ಚಿಂತೆ ಇಲ್ಲ ಎಂದರು.
  ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಘೋಷಣೆ ಶೀಘ್ರವಾಗಿ ಆಗಲಿದೆ. ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆಗೆ ನಿಯಮಾವಳಿ ಇದ್ದು, ಅದರಂತೆ ರಾಜ್ಯ ಹಾಗೂ ಕೇಂದ್ರ ಸಮಿತಿ ಚರ್ಚಿಸಿ ಅನಂತರ ಅಭ್ಯರ್ಥಿ ಘೋಷಣೆ ಮಾಡಲಿದೆ. ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಜಿಲ್ಲೆಯ ಶಾಸಕರು, ಮುಖಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿ ಎಲ್ಲರೂ ಒಗ್ಗೂಡಿ ಅಭ್ಯರ್ಥಿಯ ಆಯ್ಕೆ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
  ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಲು ಸ್ವಲ್ಪ ಸಮಸ್ಯೆ ಎದುರಾಗಿದೆ. ಕಳೆದ ಬಾರಿ 10 ದಿನ ನಾಲೆಗಳಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಜಲಾಶಯದಲ್ಲಿ ಕುಡಿಯುವ ನೀರಿಗೆ ಸಾಕಾಗುವಷ್ಟು ಮಾತ್ರ ನೀರಿದ್ದು, ಮುಂದಿನ ಜೂನ್‌ವರೆಗೆ ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗಿದೆ. ಅಧಿಕಾರಿಗಳ ಮನವರಿಕೆ ಪ್ರಯತ್ನ ಮಾಡುತ್ತಿದ್ದೇವೆ. ಒಂದೆರಡು ದಿನದಲ್ಲಿ ತೀರ್ಮಾನ ಮಾಡುತ್ತೇವೆ. ನಾಲಾ ಕಾಮಗಾರಿಗೂ ನೀರು ಬಿಡುವ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ. ಕಾಮಗಾರಿ ಸ್ಥಗಿತ ಮಾಡಿ ನೀರು ಬಿಡಬಹುದಾಗಿದೆ ಎಂದು ಹೇಳಿದರು.
  ಮಿಮ್ಸ್ ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಹಂತ ಹಂತವಾಗಿ ಪರಿಹರಿಸಲು ಮುಂದಾಗಿದ್ದೇವೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ದೂರು ಬಂದಿದ್ದು, ಈಗಾಗಲೇ ವೈದ್ಯರಿಗೆ ದಿನದ 24 ತಾಸು ತಪಾಸಣೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಮಿಳು ಕಾಲನಿ ಸ್ಥಳಾಂತರ ವಿಚಾರವಾಗಿ ಕಾನೂನು ತೊಡಕು ಇದ್ದು, ಅದನ್ನು ಪರಿಹರಿಸಿ ಕ್ರಮ ವಹಿಸುತ್ತೇವೆ. ಫೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ತಿಂಗಳೊಳಗೆ ಮುಗಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts