ಕೊಲ್ಲೂರು ದೇವಳ ಆನೆ ಇಂದಿರಾಗೆ ಭಾವಪೂರ್ಣ ವಿದಾಯ

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅನೆ ಇಂದಿರಾ ಅಂತ್ಯಸಂಸ್ಕಾರ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಬುಧವಾರ ನೆರವೇರಿತು.
ಇಂದಿರಾ ಅಂತಿಮ ದರ್ಶನಕ್ಕೆ ಮಂಗಳವಾರ ರಾತ್ರಿಯಿಂದಲೇ ಜನರು ಆಗಮಿಸುತ್ತಿದ್ದರು. ಬುಧವಾರ ಮುಂಜಾನೆಯಿಂದ ಸುರಿವ ಮಳೆ ಲೆಕ್ಕಿಸದೆ ಸಹಸ್ರಾರು ಮಂದಿ ಕೊಲ್ಲೂರಿನ ಕಲ್ಯಾಣಿಗುಡ್ಡೆಗೆ ಆಗಮಿಸಿ ಅಂತಿಮ ದರ್ಶನ ಪಡೆದರು.

ಸಕ್ಕರೆಬೈಲಿನಿಂದ ಆಗಮಿಸಿದ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಯಿತು. ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ ಸೇರಿದಂತೆ ಸದಸ್ಯರು, ಮಾಜಿ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ ಮತ್ತಿತರರಿದ್ದರು.

ನಾಗರಿಕರು ಹೂ, ಗಂಧದ ಹಾರ, ಅಗರಬತ್ತಿ ತಂದು ಅರ್ಪಿಸಿ, ಗಜರಾಣಿಗೆ ಸುತ್ತು ಹಾಕಿದರು. ಸಕಲ ಧಾರ್ಮಿಕ ವಿಧಿವಿಧಾನ ಪೂರೈಸಿ ಗಜಕಲಶ ಹೋಮ ನಡೆಸಲಾಯಿತು. ಶೆಡ್ ಸಮೀಪದಲ್ಲಿಯೇ ಆನೆಯನ್ನು ಕ್ವಿಂಟಾಲುಗಟ್ಟಲೆ ಕಟ್ಟಿಗೆ, 5 ಡಬ್ಬಿ ತುಪ್ಪ, ಗಂಧದ ಮೂಲಕ ಚಿತೆ ಸಿದ್ಧಪಡಿಸಿ ಮುಸ್ಸಂಜೆ ಹೊತ್ತಿಗೆ ಅಗ್ನಿಸ್ಪರ್ಶ ಮಾಡಲಾಯಿತು.

ಇಂದಿರಾ ಮಾವುತ ಐಯಣ್ಣ ಯಾನೆ ಬಾಬಣ್ಣ ಸೇರಿದಂತೆ ಆಸುಪಾಸಿನ ಮಂದಿ ದುಃಖತಪ್ತರಾಗಿದ್ದರು. ಕೊಲ್ಲೂರಿನ ನಾಗರಿಕರು ಆಟೋ, ಜೀಪ್ ಸಂಚಾರ ಸ್ಥಗಿತಗೊಳಿಸಿದ್ದಲ್ಲದೆ ಬಹುತೇಕ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ಇಂದಿರಾ ಸಾವಿಗೆ ಸಂತಾಪ ಸೂಚಿಸಿದರು.
ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತ ಆನೆಗೆ ನುರಿತ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದ್ದು, 50ಕ್ಕೂ ಅಧಿಕ ಬಾಟಲಿ ಗ್ಲೂಕೋಸ್ ನೀಡಲಾಗಿತ್ತು. ಚಿಕಿತ್ಸೆ ಫಲಿಸದೆ ಆನೆ ಮಂಗಳವಾರ ರಾತ್ರಿ ಅಸುನೀಗಿತ್ತು.

22 ವರ್ಷಗಳ ಸೇವೆ: ದೇವಸ್ಥಾನಕ್ಕೆ ಬರುವ ಭಕ್ತರು ನೀಡುವ ಕಾಣಿಕೆ, ಬಾಳೆಹಣ್ಣುಗಳನ್ನು ಪಡೆದು ಅವರಿಗೆ ಸೊಂಡಿಲೆತ್ತಿ ಆಶೀರ್ವಾದ ಮಾಡುತ್ತಿದ್ದ ಇಂದಿರಾ ಯಾರಿಗೂ ತೊಂದರೆ ಕೊಟ್ಟವಳಲ್ಲ. ಬಾಳೆಹೊನ್ನೂರಿನ ಮಧು ಎನ್ನುವರು ದೇವಳಕ್ಕೆ ದಾನ ಕೊಟ್ಟಿದ್ದ ಆನೆಗೆ ಅಂದಿನ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ನೇತೃತ್ವದಲ್ಲಿ ಇಂದಿರಾ ಎಂದು ನಾಮಕರಣ ಮಾಡಲಾಗಿತ್ತು. ಅಂದಿನಿಂದ 22 ವರ್ಷ ದೇವಿಯ ಸೇವೆಯಲ್ಲಿ ತೊಡಗಿದ್ದ ಇಂದಿರಾ ನಿತ್ಯ ಬೆಳಗ್ಗೆ ದೇವಳ ಮುಖ್ಯದ್ವಾರದ ಮೂಲಕ ಪ್ರವೇಶಿಸಿ ಮೂರು ಸುತ್ತು ಪ್ರದಕ್ಷಿಣೆ ಬಳಿಕ ಧ್ವಜಕ್ಕೆ ಹಾಗೂ ಅಧಿಕಾರಿ, ವ್ಯವಸ್ಥಾಪನಾ ಸಮಿತಿ ಕಚೇರಿ ಮುಂದೆ ನಮಸ್ಕರಿಸಿ ಬಳಿಕ ದೇವಸ್ಥಾನದ ಹೊರ ಆವರಣದಲ್ಲಿ ನಿಂತು ಭಕ್ತರನ್ನು ಸಂತುಷ್ಟಗೊಳಿಸುತ್ತಿದ್ದಳು. ಬುಧವಾರ ಆಕೆ ನಿತ್ಯ ನಿಲ್ಲುತ್ತಿದ್ದ ಜಾಗ ಬಿಕೋ ಎನ್ನುತ್ತಿತ್ತು. ಕೊಲ್ಲೂರು ನಾಗರಿಕರ ಜತೆ ಅವಿನಾಭಾವ ಸಂಬಂಧ ಹೊಂದಿದ್ದ ಇಂದಿರಾ ಅಗಲಿಕೆಯ ನೋವು ಎಲ್ಲರಲ್ಲೂ ಮಡುಗಟ್ಟಿತ್ತು.

Leave a Reply

Your email address will not be published. Required fields are marked *