ಹಂತಕರು ಮಲಗಿದ್ದು ಪೊಲೀಸನ ಮನೇಲಿ!

<ಅವಳಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕರಿಸಿದ ಇಬ್ಬರು ಪೇದೆಗಳ ಬಂಧನ>

ಉಡುಪಿ: ಕೋಟದ ಅವಳಿ ಕೊಲೆಗೆ ಸಂಬಂಧಿಸಿ ಪ್ರಕರಣದಲ್ಲಿ ಭಾಗಿಯಾದವರು, ಸಹಕರಿಸಿದವರು ಒಬ್ಬೊಬ್ಬರಾಗಿ ಪೊಲೀಸರ ಬಲೆಗೆ ಬೀಳುತ್ತಿದ್ದು, ಈಗ ಆರೋಪಿಗಳಿಗೆ ಪರಾರಿಯಾಗಲು ಸಹಕರಿಸಿದ ಆರೋಪದಲ್ಲಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.

ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆ ಪೇದೆಗಳಾದ ಹೆಬ್ರಿಯ ಕುಚ್ಚೂರು ನಿವಾಸಿ ಪವನ್ ಅಮಿನ್ ಮತ್ತು ಬೈಂದೂರು ನಿವಾಸಿ ವೀರೇಂದ್ರ ಅಚಾರ್ಯ ಬಂಧಿತರು. ಆರೋಪಿಗಳನ್ನು ಭಾನುವಾರ ರಾತ್ರಿ ಬಂಧಿಸಲಾಗಿದ್ದು, ಕುಂದಾಪುರ ನ್ಯಾಯಾಲಯ ಫೆ.15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕೋಟದ ಮಣೂರಿನಲ್ಲಿ ಜ.26ರಂದು ರಾತ್ರಿ ಭರತ್ ಶ್ರೀಯಾನ್ ಮತ್ತು ಯತೀಶ್ ಕಾಂಚನ್ ಅವರ ಕೊಲೆಯಾಗಿತ್ತು. ಈ ಪ್ರಕರಣದ ಆರೋಪಿಗಳಾದ ಹರೀಶ್ ರೆಡ್ಡಿ, ರಾಜಶೇಖರ ರೆಡ್ಡಿ, ಮಹೇಶ ಗಾಣಿಗ, ಸಂತೋಷ್ ಕುಂದರ್ ಮುಂತಾದವರೊಂದಿಗೆ ಆರೋಪಿ ಪೇದೆಗಳು ಹಲವು ವರ್ಷಗಳಿಂದ ಒಡನಾಟ ಇಟ್ಟುಕೊಂಡಿದ್ದರು. ಅರೋಪಿ ಪೊಲೀಸ್ ಪೇದೆಗಳಿಂದ ಕಾರು, ಮೊಬೈಲ್ ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಸೇವೆಯಿಂದ ಅಮಾನತು: 2008ರಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಗೆ ಪವನ್ ಅಮೀನ್, ವೀರೇಂದ್ರ ಆಚಾರ್ಯ ಸೇರಿದ್ದರು. ಆರಂಭದಲ್ಲಿ ಬನ್ನಂಜೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಕಂಪ್ಯೂಟರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು. 3-4 ವರ್ಷಗಳಿಂದ ಡಿಆರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಪ್ರಕರಣದಲ್ಲಿ ಆರೋಪಿಗಳಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಇಬ್ಬರನ್ನೂ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ.

ಪೇದೆಗಳ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಬಂಧಿತರ ಸಂಖ್ಯೆ ಎಂಟಕ್ಕೇರಿದೆ. ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಕೊಡವೂರು ನಿವಾಸಿ ಮಹೇಶ್ ಗಾಣಿಗ, ಕೊಡವೂರು ಲಕ್ಷ್ಮೀ ನಗರ ನಿವಾಸಿ ರವಿಚಂದ್ರ ಪೂಜಾರಿ, ಕೋಟ ಮಣೂರು ನಿವಾಸಿ ಹರೀಶ್ ರೆಡ್ಡಿ, ರಾಜಶೇಖರ ರೆಡ್ಡಿ, ಜಿ.ರವಿ ಯಾನೆ ಮೆಡಿಕಲ್ ರವಿ ಎಂಬವರನ್ನು ಇದಕ್ಕೂ ಮೊದಲೇ ಬಂಧಿಸಲಾಗಿತ್ತು.

ಹೊಸ ಸಿಮ್, ಮೊಬೈಲ್ ಕೊಟ್ರು!: ಕೋಟದ ಮಣೂರಿನಲ್ಲಿ ಜ.26ರಂದು ರಾತ್ರಿ ಭರತ್ ಕುಮಾರ್- ಯತೀಶ್ ಅವರನ್ನು ರಾಜಶೇಖರ ರೆಡ್ಡಿ ಮತ್ತವರ ತಂಡ ಕೊಲೆ ಮಾಡಿತ್ತು. ಅದೇ ದಿನ ರಾತ್ರಿ ಆರೋಪಿಗಳು ಪೊಲೀಸ್ ಪೇದೆ ಪವನ್ ಅಮೀನ್‌ನನ್ನು ಸಂಪರ್ಕಿಸಿ, ಆತನ ಹೆಬ್ರಿ ಕುಚ್ಚೂರಿನ ಮನೆಯಲ್ಲಿ ಉಳಿದುಕೊಂಡಿದ್ದರು. ಜ.27ರಂದು ಬೆಳಗ್ಗೆ ಪವನ್‌ಗೆ ಆರೋಪಿ ಹರೀಶ್ ರೆಡ್ಡಿ ಫೋನ್ ಮಾಡಿ, ಒಂದು ಹೊಸ ಸಿಮ್, ಮೊಬೈಲ್, ಹಣ ಮತ್ತು ಕೆಲವು ವಸ್ತು ಕಳುಹಿಸಿಕೊಡಲು ಕೇಳಿದ್ದಾನೆ. ಪ್ರಣವ್ ಭಟ್ ಎಂಬವನ ಮೂಲಕ ಅವುಗಳನ್ನು ಕುಚ್ಚೂರಿನಲ್ಲಿ ತನ್ನ ಮನೆಯಲ್ಲಿರುವ ಆರೋಪಿಗಳಿಗೆ ಪೇದೆ ತಲುಪಿಸಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಆರೋಪಿಗಳಿಗೆ ಕಾರಿನ ವ್ಯವಸ್ಥೆ: ಜ.27ರಂದು ರಾತ್ರಿ ಆರೋಪಿಗಳಿಗೆ ಪರಾರಿಯಾಗಲು ಪೇದೆ ಪವನ್ ಅಮೀನ್ ಇನ್ನೋರ್ವ ಪೇದೆ ವೀರೇಂದ್ರ ಅಚಾರ್ಯನೊಂದಿಗೆ ಸೇರಿ ಕಾರಿನ ವ್ಯವಸ್ಥೆ ಮಾಡಿದ್ದಾನೆ. ಆರೋಪಿಗಳಿಗೆ ಶಿವಮೊಗ್ಗ ಜಿಲ್ಲೆಯ ಆಗುಂಬೆ, ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ಮಲ್ಲಂದೂರಿನ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಜ.28ರಂದು ಅರೋಪಿಗಳನ್ನು ಮಲ್ಲಂದೂರಿನಲ್ಲಿ ಬಿಟ್ಟು ವೀರೇಂದ್ರ ಆಚಾರ್ಯ, ಪವನ್ ಅಮಿನ್ ವಾಪಸ್ ಕಾರಿನಲ್ಲಿ ಬರುವಾಗ, ಆರೋಪಿ ಹರೀಶ್ ರೆಡ್ಡಿ ನೀಡಿದ ಮೊಬೈಲ್, ಇತರೆ ವಸ್ತುಗಳನ್ನು ಬಚ್ಚಿಟ್ಟಿದ್ದಾರೆ.

ಜಿಪಂ ಸದಸ್ಯನ ರಾಜೀನಾಮೆ ಆಗ್ರಹ: ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಕೂಡಲೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಗ್ರಹಿಸಿದರು. ಕೋಟ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಕೋಟ ಜೋಡಿ ಕೊಲೆ ಖಂಡಿಸಿ ಹಾಗೂ ಆರೋಪಿ ಕೋಟ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ರಾಜೀನಾಮೆ ಆಗ್ರಹಿಸಿ ಕೋಟ ಬಸ್ ನಿಲ್ದಾಣದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದುಷ್ಕೃತ್ಯ ನಡೆದರೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಕೊಲೆ ಆರೋಪಿ ಜಿಪಂ ಸದಸ್ಯನಿಗೆ ಬಿಜೆಪಿ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು. ಎಲ್ಲೇ ಕೊಲೆ ನಡೆದರೂ ಪ್ರತಿಭಟಿಸುವ ಬಿಜೆಪಿಗರು ಕೋಟದಲ್ಲಿ ನಡೆದ ಕೊಲೆ ಬಗ್ಗೆ ಯಾಕೆ ಪ್ರತಿಭಟಿಸುತ್ತಿಲ್ಲ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಕಾಸ್ ಹೆಗ್ಡೆ ಪ್ರಶ್ನಿಸಿದರು. ಕೊಲೆಯಾದ ಯುವಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಗೋಪಾಲ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಅಲ್ಪಸಂಖ್ಯಾತ ಘಟಕದ ಇಸ್ಮಾಯಿಲ್ ಆತ್ರಾಡಿ, ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಅಮೃತ್ ಶೆಣೈ, ರಾಜಾರಾಮ್ ಸಾಸ್ತಾನ, ಮಮತಾ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಇಚ್ಚಿತಾರ್ಥ ಶೆಟ್ಟಿ, ಅಜಿತ್ ಶೆಟ್ಟಿ, ಕಿಶೋರ್ ಮಂದಾರ್ತಿ, ಜಿ.ತಿಮ್ಮ ಪೂಜಾರಿ, ಸತೀಶ್ ಕಾರ್ಕಳ, ಶ್ರೀಧರ ಪಿ.ಎಸ್. ಭಾಗವಹಿಸಿದ್ದರು. ಸಾಲಿಗ್ರಾಮ ಪಪಂ ಸದಸ್ಯ ಶ್ರೀನಿವಾಸ ಅಮೀನ್ ನಿರೂಪಿಸಿದರು. ಗಣೇಶ್ ನೆಲ್ಲಿಬೆಟ್ಟು ಸಹಕರಿಸಿದರು.

ಕೋಟ ಶ್ರೀನಿವಾಸ ಪೂಜಾರಿಗೆ ಶ್ಲಾಘನೆ: ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಎಲ್ಲೂ ಕಾಂಗ್ರೆಸ್ ಮುಖಂಡರು ದೂರಲಿಲ್ಲ. ಅದರಲ್ಲೂ ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿಯವರು, ಹೋರಾಟದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಪಾಲ್ಗೊಂಡು ಸಹಕರಿಸಿರುವುದನ್ನು ಉಲ್ಲೇಖಿಸಿ ಶ್ಲಾಘಿಸಿದರು.