ಆಕಾಶಭವನ ಶರಣ್ ಬಂಧನ

ಮಂಗಳೂರು: ಶಸ್ತ್ರಾಸ್ತ್ರ ಕಾಯ್ದೆಯಡಿ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಕ್ರಿಮಿನಲ್, ರೌಡಿಶೀಟರ್ ಆಕಾಶಭವನ ಶರಣ್‌ನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಈತನ ವಿರುದ್ಧ ಜನವರಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಇತರೇ ಹಲವು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ. ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈತನ ಗ್ಯಾಂಗ್‌ನ ಸಹಚರರ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತೆಯ ಅತ್ಯಾಚಾರ ಆರೋಪಿ: ಹುಲಿ ವೇಷ ತರಬೇತಿ ಪಡೆಯಲು ಬಂದಿದ್ದ ಅಪ್ರಾಪ್ತೆಯನ್ನು ಪುಸಲಾಯಿಸಿ ಹೊಸ ವರ್ಷಾಚರಣೆ ಪಾರ್ಟಿಗೆ ಕರೆದೊಯ್ದು ಮೂರು ದಿನ ಕಾಲ ಮಣಿಪಾಲ ಲಾಡ್ಜ್‌ನಲ್ಲಿರಿಸಿ ಆಕೆಯ ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲೂ ಈತ ಪೊಲೀಸರಿಗೆ ಬೇಕಾಗಿದ್ದ.

2018 ಡಿಸೆಂಬರ್‌ನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈತ ಹುಲಿ ವೇಷ ತರಗತಿ ನಡೆಸುತ್ತಿದ್ದ. ನಗರದ ಹಲವು ಮಂದಿ ಹುಲಿ ವೇಷ ನೃತ್ಯಾಭ್ಯಾಸ ಕಲಿಯಲು ಬರುತ್ತಿದ್ದರು. ಈ ಪೈಕಿ ಅಪ್ರಾಪ್ತೆಯೊಬ್ಬಳ ಮೊಬೈಲ್ ನಂಬರ್ ಪಡೆದು ಆಕೆಯ ಜತೆ ಸ್ನೇಹ ಸಂಪಾದಿಸಿದ್ದ. ಡಿ.31ರಂದು ಹೊಸ ವರ್ಷಾಚರಣೆ ಪಾರ್ಟಿಗೆಂದು ಪುಸಲಾಯಿಸಿ ಆಕೆಯನ್ನು ಮಣಿಪಾಲಕ್ಕೆ ಕರೆದೊಯ್ದಿದ್ದ. ಅಲ್ಲಿ ಪಬ್‌ನಲ್ಲಿ ಬಲವಂತವಾಗಿ ಆಕೆಗೆ ಮದ್ಯ ಕುಡಿಸಿದ್ದ. ಬಳಿಕ ಸ್ನೇಹಿತರ ಸಹಕಾರದಲ್ಲಿ ಆಕೆಯನ್ನು ಮೂರು ದಿನ ಲಾಡ್ಜ್‌ನಲ್ಲಿರಿಸಿ ನಿರಂತರ ಅತ್ಯಾಚಾರ ಎಸಗಿದ್ದ. ಇದರಿಂದ ಅಸೌಖ್ಯಕ್ಕೀಡಾದ ಬಾಲಕಿಯನ್ನು ಕರೆ ತಂದು ಸಹಚರರ ಮೂಲಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದ.

ಜ.6ರಂದು ಬಾಲಕಿ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದಳು. ಶರಣ್ ಹಾಗೂ ಆತನ ಇಬ್ಬರು ಸಹಚರರ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆರೋಪಿ ಶರಣ್ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಆತನ ಇಬ್ಬರು ಸಹಚರರು ಈ ಹಿಂದೆಯೇ ಬಂಧಿಸಲ್ಪಟ್ಟಿದ್ದರು.

ಶರಣ್ ವಿರುದ್ಧ ಸುಳ್ಯದ ಕೆವಿಜಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ರಾಮಕೃಷ್ಣ ಕೊಲೆ ಪ್ರಕರಣ ಸೇರಿದಂತೆ ಮೂರು ಕೊಲೆ, ಒಂದು ಕೊಲೆ ಯತ್ನ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ದೆಯೊಬ್ಬರ ಮೇಲೆ ಅತ್ಯಾಚರಗೈದು ದರೋಡೆ ನಡೆಸಿದ ಪ್ರಕರಣ ಸೇರಿದಂತೆ 18ಕ್ಕೂ ಅಧಿಕ ಕೇಸ್‌ಗಳು ಈತನ ವಿರುದ್ಧ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *