ಬೆಟ್ಟಿಂಗ್ ದಂಧೆ ಮೂವರ ಬಂಧನ

<<ಅಪರಾಧ ಪತ್ತೆದಳ ಕಾರ್ಯಾಚರಣೆ *62,700 ರೂ., 4 ಮೊಬೈಲ್ ವಶ>>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಮೂವರನ್ನು ಮಂಗಳೂರು ನಗರ ಅಪರಾಧ ಪತ್ತೆದಳ ಪೊಲೀಸರು ಬಿಜೈ ಬಳಿ ಮಂಗಳವಾರ ಬಂಧಿಸಿ, ನಗದು ಸಹಿತ ಸೊತ್ತು ವಶಪಡಿಸಿಕೊಂಡಿದ್ದಾರೆ.
ಬೋಳೂರು ನಿವಾಸಿಗಳಾದ ಅನಿಲ್‌ರಾಜ್, ಭಾನುಪ್ರಕಾಶ್ ಶೆಟ್ಟಿ ಹಾಗೂ ಜೇಮ್ಸ್ ಬಂಧಿತರು. ಇನ್ನೋರ್ವ ಆರೋಪಿ ಮನೋಹರ್ ಪರಾರಿಯಾಗಿದ್ದಾನೆ. ಬಂಧಿತರಿಂದ ಬೆಟ್ಟಿಂಗ್‌ನಲ್ಲಿ ಬಳಸಲಾದ 62,700 ರೂ. ಹಾಗೂ 4 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಬೆಟ್ಟಿಂಗ್‌ಗಾಗಿ ರೂಮ್ ಮಾಡಿದ್ದರು: ಐಪಿಎಲ್ ಕ್ರಿಕೆಟ್ ಪಂದ್ಯಾಟ ಹಿನ್ನೆಲೆಯಲ್ಲಿ ಆರೋಪಿಗಳು ಬೆಟ್ಟಿಂಗ್ ದಂಧೆ ನಡೆಸಲು ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪ ರೂಮೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಅದರಲ್ಲಿ ಟಿ.ವಿ ಇರಿಸಿಕೊಂಡು ಮೊಬೈಲ್ ಅಪ್ಲಿಕೇಶನ್ ಮೂಲಕ ಬೆಟ್ಟಿಂಗ್ ವ್ಯವಹಾರ ಕುದುರಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ನಗರ ಸಿಸಿಬಿ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಲ್ಲಿ ಭಾನುಪ್ರಕಾಶ್ ಎಂಬಾತ ಬಂಟ್ಸ್‌ಹಾಸ್ಟೆಲ್‌ನ ನೆಟ್‌ವರ್ಕ್ ಸಂಸ್ಥೆಯಲ್ಲಿ ದುಡಿಯುತ್ತಿದ್ದರೆ, ಜೇಮ್ಸ್ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿಗಳನ್ನು ಹಾಗೂ ವಶಕ್ಕೆ ಪಡೆದ ಸೊತ್ತುಗಳನ್ನು ಮುಂದಿನ ತನಿಖೆಗೆ ಬರ್ಕೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಸಿಪಿ ಶ್ರೀನಿವಾಸ ಗೌಡ, ಪಿಎಸ್‌ಐ ಕಬ್ಬಳ್‌ರಾಜ್, ಕಾನ್‌ಸ್ಟೆಬಲ್ ರಾಜಾ, ಆಶಿತ್, ಮಣಿ ಉಪಸ್ಥಿತರಿದ್ದರು.

ಬೆಟ್ಟಿಂಗ್ ಮೇಲೆ ಹದ್ದಿನ ಕಣ್ಣು: ಐಪಿಎಲ್ ಬೆಟ್ಟಿಂಗ್‌ನಲ್ಲಿ ತೊಡಗಿಕೊಳ್ಳದಂತೆ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಕೆಲ ದಿನಗಳ ಹಿಂದೆ ಟ್ವಿಟರ್ ಮೂಲಕ ಬುಕ್ಕಿಗಳಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದ್ದರು. ಪೊಲೀಸರು ಎಲ್ಲ ಕಡೆ ಬೆಟ್ಟಿಂಗ್ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಸಾರ್ವಜನಿಕರಿಗೆ ಮಾಹಿತಿ ಸಿಕ್ಕಿದರೆ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.

ಮಟ್ಕಾ ನಿರತ ಇಬ್ಬರ ಬಂಧನ:  ಬೋಳೂರು ಹಾಲ್‌ವೊಂದರ ಸಮೀಪ ಮಟ್ಕಾ ಚೀಟಿ ಬರೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬರ್ಕೆ ಪೊಲೀಸರು ಮಂಗಳವಾರ ಸಾಯಂಕಾಲ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೋಳೂರು ನಿವಾಸಿಗಳಾದ ಮಹೇಶ್(48) ಮತ್ತು ಅನಿಲ್(45) ಬಂಧಿತರು. ಆರೋಪಿಗಳಿಂದ 2 ಮೊಬೈಲ್ ಹಾಗೂ 2050 ರೂ. ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಬರ್ಕೆ ಇನ್‌ಸ್ಪೆಕ್ಟರ್ ಸೂರಜ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.