ಕೋಲಾರ: ತಾಲೂಕಿನ ಗದ್ದೆಕಣ್ಣೂರಿನಲ್ಲಿ ಮೂರು ದಿನಗಳ ಹಿಂದೆ ಮೃತಪಟ್ಟಿದ್ದ ಮಗಳ ಸಾವಿನ ಬಗ್ಗೆ ಪಾಲಕರು ಅನುಮಾನ ವ್ಯಕ್ತಪಡಿಸಿ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸಮ್ಮುಖದಲ್ಲಿ ಮಂಗಳವಾರ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಗ್ರಾಮದ ದೇವರಾಜ್ ಎಂಬುವರ ಪುತ್ರಿ ಲಕ್ಷ್ಮೀ (17) ಶನಿವಾರ ಮನೆಯ ನೀರಿನ ತೊಟ್ಟಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪಾಲಕರು ಅಂತ್ಯ ಸಂಸ್ಕಾರವನ್ನೂ ನಡೆಸಿದ್ದರು. ಆದರೆ ಒಂದು ಫೋನ್ ಕರೆ ಸಂಶಯ ಹುಟ್ಟುಹಾಕಿದ್ದು, ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಕೋಲಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಅದರಂತೆ ತಹಸೀಲ್ದಾರ್ ಶೋಭಿತಾ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಪ್ರಕರಣದ ವಿವರ: ಕೆಂಬೋಡಿಯ ಜನತಾ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಲಕ್ಷ್ಮೀ ಶನಿವಾರ ಕಾಲೇಜಿಗೆ ಹೋಗಿ ವಾಪಸಾಗಿದ್ದಳು. ತೋಟಕ್ಕೆ ಬರುವಂತೆ ತಂದೆ ಹೇಳಿದರೂ ಮನೆಯಲ್ಲೇ ಇರುವುದಾಗಿ ತಿಳಿಸಿದ್ದಳು. ದೇವರಾಜ್ ಸಂಜೆ ಮನೆಗೆ ಬಂದಾಗ ಮಗಳು ಕಾಣಿಸಲಿಲ್ಲ. ಈ ವೇಳೆ ಸಂಪ್‌ಗೆ ನೀರು ಬರುತ್ತಿದ್ದುದನ್ನು ನೋಡಲು ಸಂಪ್ ತೆಗೆದಾಗ ಮೃತದೇಹ ಪತ್ತೆಯಾಗಿತ್ತು. ಗಾಬರಿಗೊಂಡ ಪಾಲಕರು, ಸಂಬಂಧಿಕರು, ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿ ತೋಟದಲ್ಲಿ ಮಗಳ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಕೊಲೆ ಆರೋಪ: ಕೋಲಾರ ನಗರದ ಸ್ಲಂ ಬಡಾವಣೆ ನಿವಾಸಿ ಅಭಿ ಹೆಸರಿನಲ್ಲಿ ಯುವತಿ ತಂದೆ ದೇವರಾಜ್‌ಗೆ ಕರೆ ಬಂದಿದೆ. ನಾನು ನಿಮ್ಮ ಮಗಳನ್ನು ಇಷ್ಟಪಡುತ್ತಿದ್ದೇನೆಂದು ತಿಳಿಸಿ ಸಾವಿನ ಬಗ್ಗೆ ಪ್ರಶ್ನಿಸಿದ್ದಾನೆ. ಇದರಿಂದ ಅನುಮಾನಗೊಂಡ ಪಾಲಕರು ಮಗಳನ್ನು ಕೊಲೆ ಮಾಡಿ ಸಂಪಿನೊಳಗೆ ಹಾಕಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಕೋಲಾರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಮರಣೋತ್ತರ ವರದಿ ಬಂದ ನಂತರ ನಿಜಾಂಶ ತಿಳಿಯಲಿದೆ.