ಕಾಸರಗೋಡು: ಸಿಬಿಐ ಅಧಿಕಾರಿ ಸೋಗಿನಲ್ಲಿ ಕರೆಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಕಾಸರಗೋಡು ಜಿಲ್ಲೆ ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಕ್ಕಾಡ್ ವಲಿಯಪರಂಬ ನಿವಾಸಿ ಮಹಮ್ಮದ್ ಜಾಬಿರ್ ಎಂಬುವರ ಬರೋಬ್ಬರಿ 4.13ಲಕ್ಷ ರೂ. ದೋಚಿದ್ದಾನೆ. ಮಹಮ್ಮದ್ ಜಾಬಿರ್ ಅವರ ದೂರಿನ ಮೇರೆಗೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಿಬಿಐ ಅಧಿಕಾರಿಯೆಂದು ಜಾಬಿರ್ ಅವರಿಗೆ ಕರೆಮಾಡಿ ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ, ನಿಮ್ಮ ಆಧಾರ್ ಕಾರ್ಡ್ ಉಪಯೋಗಿಸಿ ಬ್ಯಾಂಕ್ ಖಾತೆ ಮೂಲಕ ಅನಧಿಕೃತ ಹಣದ ವ್ಯವಹಾರ ನಡೆಸಲಾಗುತ್ತಿದೆ. ಅಲ್ಲದೆ ಅಶ್ಲೀಲ ಸಂದೇಶ ರವಾನೆಯಾಗುತ್ತಿರುವ ಬಗ್ಗೆ ಮುಂಬೈ ಅಂಧೇರಿ ಠಾಣೆಯಲ್ಲಿ ದೂರು ದಾಖಲಾಗಿದೆ. ತಕ್ಷಣ ಹಣ ನೀಡದಿದ್ದಲ್ಲಿ, ವರ್ಚುವಲ್ ಅರೆಸ್ಟ್ ನಡೆಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ಇದರಿಂದ ಕಂಗಾಲಾದ ಮಹಮ್ಮದ್ ಜಾಬಿರ್ ತಕ್ಷಣ ಹಣ ಪಾವತಿಸಿದ್ದಾರೆ. ಹಣ ಕಳುಹಿಸಿಕೊಟ್ಟ ನಂತರ ತಾನು ವಂಚನೆಗೊಳಗಾಗಿರುವ ಬಗ್ಗೆ ತಿಳಿದುಕೊಂಡ ಜಾಬಿರ್ ಪೊಲೀಸರಿಗೆ ದೂರು ನೀಡಿದ್ದಾರೆ.