ಕೆಸಿಎಲ್ ಪಂದ್ಯಾವಳಿಗೆ ಹೊಸ ಮೈದಾನ ಸಜ್ಜು

ಅಜ್ಜಮಾಡ ರಮೇಶ್ ಕುಟ್ಟಪ್ಪ
ಕೊಡಗಿನ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿ ಎಂದೇ ಗುರುತಿಸಲ್ಪಟ್ಟಿರುವ ಕೊಡಗು ಚಾಂಪಿಯನ್ ಲೀಗ್ (ಕೆಸಿಎಲ್) ಏಪ್ರಿಲ್ 27 ರಿಂದ ಮೇ 2 ರವರೆಗೆ ನಡೆಯಲಿದ್ದು, ಇದಕ್ಕಾಗಿ ಕರಡಿಗೋಡು ಗ್ರಾಮದಲ್ಲಿ ಹೊಸ ಮೈದಾನ ಸಜ್ಜುಗೊಳಿಸಲಾಗುತ್ತಿದೆ.
ಸಿದ್ದಾಪುರದಿಂದ ಮೂರು ಕಿ.ಮೀ. ದೂರದಲ್ಲಿರುವ ಕರಡಿಗೋಡು ಗ್ರಾಮದಲ್ಲಿ ಹಲವು ವರ್ಷಗಳಿಂದ ಪಾಳು ಬಿದ್ದಿರುವ ಏಳು ಎಕರೆ ಗದ್ದೆಯಲ್ಲಿ ಕೆಸಿಎಲ್ ಪಂದ್ಯಾವಳಿ ಆಯೋಜಿಸಲು ಗದ್ದೆ ಮಾಲೀಕರಾದ ಕುಕ್ಕೂನೂರು ಕುಟುಂಬದವರು ಒಪ್ಪಿಗೆ ನೀಡಿದ್ದಾರೆ. ಕುಕ್ಕೂನೂರು ಪುರುಷೋತ್ತಮ, ಕುಕ್ಕೂನೂರು ಪ್ರಕಾಶ್ ಅವರಿಗೆ ಸೇರಿದ ಗದ್ದೆಯನ್ನು ಕ್ರಿಕೆಟ್ ಮೈದಾನವಾಗಿ ಸಜ್ಜುಗೊಳಿಸಲಾಗುತ್ತಿದೆ. ಕುಕ್ಕೂನೂರು ಬಾಲಕೃಷ್ಣ, ಕುಕ್ಕೂನೂರು ಚೇತನ್ ಸ್ಮರಣಾರ್ಥ ಮೈದಾನಕ್ಕೆ ಇವರಿಬ್ಬರ ಹೆಸರಿಡಲಾಗುತ್ತಿದೆ.
ಎರಡು ಜೆಸಿಬಿ, ಎರಡು ಟ್ರ್ಯಾಕ್ಟರ್, ಒಂದು ಟಿಪ್ಪರ್ ಬಳಸಿ, ಮೈದಾನ ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ. ಹೀಗಾಗಿ, ಒಂದು ಪೂರ್ಣ ಪ್ರಮಾಣದ ಕ್ರಿಕೆಟ್ ಮೈದಾನದಲ್ಲಿ ಪ್ರಥಮ ಬಾರಿಗೆ ಕೆಸಿಎಲ್ ಪಂದ್ಯಾವಳಿ ನಡೆಯಲಿದೆ. ಹೊಸ ಮೈದಾನ ನಿರ್ಮಾಣಕ್ಕಾಗಿ 1 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ. ವಿಶಾಲ ಪ್ರದೇಶವಾಗಿರುವುದರಿಂದ ವಾಹನ ನಿಲುಗಡೆ ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಮಾಡಲು ಅವಕಾಶ ಲಭ್ಯವಾಗಿದೆ.

ಕೆಲವರ ಒತ್ತಡದಿಂದಾಗಿ ಮೈದಾನ ನಿರಾಕರಣೆ: ಮೂರು ವರ್ಷ ಸಿದ್ದಾಪುರ ಪ್ರೌಢಶಾಲಾ ಮೈದಾನದಲ್ಲಿ ಕೆಸಿಎಲ್ ಪಂದ್ಯಾವಳಿ ಯಶಸ್ವಿಯಾಗಿ ನಡೆದಿತ್ತು. ಆದರೆ, ಜಾತಿ, ಧರ್ಮ ಮತ್ತು ವೈಯಕ್ತಿಕ ನೆಲೆಗಟ್ಟಿನಲ್ಲಿ ಕೆಲವರ ಒತ್ತಡದಿಂದಾಗಿ ಶಾಲಾ ಮೈದಾನ ನೀಡದ್ದರಿಂದ ಈ ಬಾರಿ ಕೆಸಿಎಲ್ ನಡೆಯುವುದು ಅನುಮಾನವಾಗಿತ್ತು. ಸಿದ್ದಾಪುರ ವ್ಯಾಪ್ತಿಯಲ್ಲಿ ಸೂಕ್ತ ಆಟದ ಮೈದಾನ ಲಭ್ಯವಿಲ್ಲದ್ದರಿಂದ ಮೂರ್ನಾಡು, ಅಮ್ಮತ್ತಿ, ಪಾಲಿಬೆಟ್ಟದಲ್ಲಿ ಪಂದ್ಯಾವಳಿ ಆಯೋಜಿಸಲು ಯೋಚಿಸಲಾಗಿತ್ತು.
ಕಕ್ಕಟ್ಟುಕಾಡು ರಸ್ತೆ ಹೋರಾಟಕ್ಕೆ ಸಂಬಂಧಿಸಿದಂತೆ ಕೆಸಿಎಲ್‌ಗೆ ಅಡ್ಡಿಪಡಿಸಲಾಗಿತ್ತು. ಹೋರಾಟದ ನೇತೃತ್ವ ವಹಿಸಿರುವ ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ರೆಜಿತ್‌ಕುಮಾರ್ ಗುಹ್ಯ ಅವರನ್ನು ಟಾರ್ಗೆಟ್ ಮಾಡಲಾಗಿತ್ತು. ರೆಜಿತ್‌ಕುಮಾರ್ ಕಾರಣಕ್ಕಾಗಿ ಸಿದ್ದಾಪುರ ಪ್ರೌಢಶಾಲಾ ಮೈದಾನ ನೀಡಲು ನಿರಾಕರಿಸಲಾಗಿತ್ತು. ಕೆಸಿಎಲ್ ಸಂಘಟಿಸುತ್ತಿರುವ ಸಿಟಿ ಬಾಯ್ಸ ಯುವಕ ಸಂಘ 4ನೇ ಆವೃತ್ತಿ ಕೆಸಿಎಲ್ ಕ್ರಿಕೆಟ್ ಪಂದ್ಯಾವಳಿ ಸಮಿತಿ ಅಧ್ಯಕ್ಷರನ್ನಾಗಿ ರೆಜಿತ್‌ಕುಮಾರ್ ಅವರನ್ನು ಆಯ್ಕೆ ಮಾಡಿದೆ.

14 ತಂಡಗಳಿಗೆ ಫ್ರಾಂಚೈಸಿ: ಕೆಸಿಎಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು 14 ತಂಡಗಳಿಗೆ ಫ್ರಾಂಚೈಸಿ ನೀಡಲಾಗುತ್ತಿದೆ. ಈಗಾಗಲೇ 13 ತಂಡಗಳು ಫ್ರಾಂಚೈಸಿ ಪಡೆದುಕೊಂಡಿದ್ದು, ಮೂರು ತಂಡಗಳ ಪೈಕಿ ಒಂದು ತಂಡಕ್ಕೆ 14ನೇ ತಂಡವಾಗಿ ಫ್ರಾಂಚೈಸಿ ನೀಡಲು ಆಯೋಜಕರು ನಿರ್ಧರಿಸಿದ್ದಾರೆ. ನೆಲ್ಲಿಹುದಿಕೇರಿಯ ಝಲ್ಲಾ ಕ್ರಿಕೆಟರ್ಸ್‌, ಗ್ರೀನ್ಸ್ ಕ್ರಿಕೆಟರ್ಸ್‌, ಗೋಣಿಕೊಪ್ಪಲಿನ ಬ್ಲ್ಯಾಕ್ ತಂಡರ್, ತ್ಯಾಗತ್ತೂರಿನ ಕೂರ್ಗ್ ಫ್ರೆಂಡ್ಸ್, ಸಿದ್ದಾಪುರದ ಟೀಮ್ ಕೂಲ್, ಫೈಯರ್ ಟೈಗರ್ಸ್‌, ಮಡಿಕೇರಿಯ ತ್ಯಾಗ್ ಬಾಯ್ಸ, ಸ್ಪೋರ್ಟ್ಸ್ ವರ್ಲ್ಡ್, ಬೆಟ್ಟದಕಾಡಿನ ಬ್ಲ್ಯಾಕ್ ವಾರಿಯರ್ಸ್‌, ಕಳತ್ತಮಾಡಿನ ವಿರಾಟ ಕ್ರಿಕೆಟರ್ಸ್‌, ಕರಡಿಗೋಡಿನ ರಾಯಲ್ಸ್ ಕುಕ್ಕೂನೂರು, ಗೋಣಿಕೊಪ್ಪಲಿನ ಆ್ಯಸ್ಸಸ್ ತಂಡಗಳು ಫ್ರಾಂಚೈಸಿ ಪಡೆದುಕೊಳ್ಳಲು ಮುಂದಾಗಿವೆ.

ಲೀಗ್ ಪಂದ್ಯಾವಳಿ: 14 ತಂಡಗಳನ್ನು ತಲಾ ಏಳು ತಂಡಗಳಾಗಿ ಎರಡು ಗುಂಪಿನಲ್ಲಿ ಲೀಗ್ ಮಾದರಿಯಲ್ಲಿ ಆಡಿಸಲಾಗುತ್ತದೆ. ಎರಡು ಗುಂಪಿನಲ್ಲಿ ಪ್ರಥಮ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಲೀಗ್ ಪಂದ್ಯಾವಳಿ 8 ಓವರ್‌ಗೆ ಸೀಮಿತವಾಗಿದ್ದು, ಪ್ರತಿ ತಂಡ ಲೀಗ್ ಪಂದ್ಯಾವಳಿಯಲ್ಲಿ 6 ತಂಡಗಳನ್ನು ಎದುರಿಸಲಿದೆ. ಸೆಮಿಫೈನಲ್ ಮತ್ತು ಫೈನಲ್ 10 ಓಮರ್‌ನ ಪಂದ್ಯಾಟ ಆಗಿರುತ್ತವೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಮಾನ್ಯತೆ ಪಡೆದ ಅಂಪೈರ್ ಮತ್ತು ಸ್ಕೋರರ್‌ಗಳು ಕೆಸಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಏಪ್ರಿಲ್ 27 ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೊಡಗು ಪ್ರೆಸ್- ಕೊಡಗು ಪೊಲೀಸ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ.

1 ಲಕ್ಷ ರೂ. ಬಹುಮಾನ: ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 1 ಲಕ್ಷ ರೂ., ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 50 ಸಾವಿರ ರೂ. ನಗದು ಬಹುಮಾನ ಹಾಗೂ ಎರಡು ತಂಡಕ್ಕೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ‘ಸರಣಿ ಶ್ರೇಷ್ಠ’ ಆಟಗಾರನಿಗೆ ಮೊಬೈಲ್, ಪ್ರತಿ ಪಂದ್ಯದಲ್ಲೂ ‘ಮ್ಯಾನ್ ಆಫ್ ದಿ ಮ್ಯಾಚ್’, ಹೆಚ್ಚು ಸಿಕ್ಸರ್ ಹೊಡೆಯುವವರು, ಫೈನಲ್ ಪಂದ್ಯ ಪುರುಷೋತ್ತಮನಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ.

ಆಟಗಾರರ ಹರಾಜು: ಕೆಸಿಎಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು 400ಕ್ಕೂ ಹೆಚ್ಚು ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಜಿಲ್ಲೆಯ ವಿವಿಧೆಡೆ ಆಟಗಾರರಿಗೆ ಅರ್ಜಿ ನೀಡಲಾಗುತ್ತಿದೆ. ಏಪ್ರಿಲ್ 6 ರಂದು ಐಕಾನ್ ಆಟಗಾರರ ಹರಾಜು ನಡೆಯಲಿದೆ. ಜಿಲ್ಲೆಯ ಅತ್ಯುತ್ತಮ ಆಟಗಾರರನ್ನು ಐಕಾನ್ ಆಟಗಾರರಾಗಿ ಗುರುತಿಸಲಾಗುತ್ತದೆ. ಪ್ರತಿ ತಂಡ ಇಬ್ಬರು ಐಕಾನ್ ಆಟಗಾರರನ್ನು ಹರಾಜಿನಲ್ಲಿ ಪಡೆದುಕೊಳ್ಳಬಹುದಾಗಿದೆ.
ತದನಂತರ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿ ತಂಡ ಕನಿಷ್ಠ 13 ಹಾಗೂ ಗರಿಷ್ಠ 15 ಆಟಗಾರರನ್ನು ಹರಾಜಿನಲ್ಲಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು. ಆಟಗಾರರನ್ನು ಖರೀದಿಸಲು ಪ್ರತಿ ತಂಡಕ್ಕೆ ನಿಗದಿತ ಮೊತ್ತ ನಿಗದಿಪಡಿಸಲಾಗುತ್ತದೆ. ಆ ಮೊತ್ತದಲ್ಲಿ ಆಟಗಾರರನ್ನು ಖರೀದಿಸಬೇಕಾಗುತ್ತದೆ. ಹೊರ ರಾಜ್ಯ, ದೇಶದಲ್ಲಿ ನೆಲೆಸಿರುವ ಕೊಡಗು ಮೂಲದ ಆಟಗಾರರು ಕೆಸಿಎಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆಗಮಿಸುವುದು ವಿಶೇಷ.