ಇಮ್ರಾನ್ ಹೊಸ ಇನಿಂಗ್ಸ್​ಗೆ ಪಂಚ ಸವಾಲು

ಪಾಕಿಸ್ತಾನದ 22ನೇ ಪ್ರಧಾನಮಂತ್ರಿಯಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಡಳಿತ ವಿಚಾರದಲ್ಲಿ ಅನನುಭವಿಯಾಗಿರುವ ಇಮ್ರಾನ್​ಗೆ ಹೊಸ ಇನಿಂಗ್ಸ್​ನಲ್ಲಿ ಪಂಚ ಸವಾಲುಗಳು ಎದುರಾಗಿವೆ. ಅವುಗಳನ್ನು ಎದುರಿಸುತ್ತ ದೇಶವನ್ನು ಯಾವ ರೀತಿ ಮುನ್ನಡೆಸುವರೆಂಬ ಕುತೂಹಲವಿದೆ.

ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ರಾಜಕಾರಣದ ಹೊಸ ಇನಿಂಗ್ಸ್ ಆರಂಭಿಸಿರುವ ಪಾಕ್ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಇಮ್ರಾನ್ ಖಾನ್​ಗೆ ಎರಡು ದಶಕದ ರಾಜಕೀಯ ಅನುಭವವಿದೆ. ಆದರೆ, ಅವರ ಪಕ್ಷ ಆಡಳಿತ ಚುಕ್ಕಾಣಿ ಹಿಡಿದಿಲ್ಲವಾದ್ದರಿಂದ ಆಡಳಿತಾನುಭವ ಕಡಿಮೆ. ಈಗ ಅವರ ಎದುರು ಸವಾಲುಗಳ ಸರಮಾಲೆಯೇ ಇದೆ. ಅವುಗಳ ಪೈಕಿ ಪ್ರಮುಖ ಐದು ಸವಾಲುಗಳು- ವಿಶೇಷವಾಗಿ ಆರ್ಥಿಕತೆ, ಭಯೋತ್ಪಾದನೆ, ಜನಸಂಖ್ಯೆ ಹೆಚ್ಚಳ, ಜಲಕ್ಷಾಮ, ನಾಗರಿಕ-ಸೇನಾ ಸಂಬಂಧ- ಅವರನ್ನು ಹೆಚ್ಚು ಸಂಕಷ್ಟಕ್ಕೊಡ್ಡುವ ಸಾಧ್ಯತೆ ಇದೆ. ಇವುಗಳನ್ನೆಲ್ಲ ಮೀರಿ ಪಾಕ್​ನ ಭವಿಷ್ಯವನ್ನು ಉಜ್ವಲಗೊಳಿಸುವ ಗುರುತರ ಹೊಣೆಗಾರಿಕೆಯನ್ನು ಕ್ಯಾಪ್ಟನ್ ನಿಭಾಯಿಸಿಯಾರೆ?

1 ಕುಸಿಯುತ್ತಿರುವ ಆರ್ಥಿಕತೆ: ಸಾಲಬಾಧೆ ಯಿಂದ ಬಸವಳಿದಿರುವ ಪಾಕ್​ನ ಹಣಕಾಸು ಪರಿಸ್ಥಿತಿ ಶೋಚನೀಯವಾಗಿದೆ. ಮುಂದಿನ ಕೆಲ ತಿಂಗಳಲ್ಲಿ ಖಜಾನೆ ಬರಿದಾಗುವ ಆತಂಕ ಇದೆ. ವಿದೇಶಿ ವಿನಿಮಯ ಸಂಪೂರ್ಣ ನೆಲಕಚ್ಚಿದ್ದು, ಅಮೆರಿಕದ ಡಾಲರ್ ಎದುರು ಪಾಕ್ ಕರೆನ್ಸಿ ರೂಪಾಯಿ(123.25 ರೂ.) ಸೋತು ಸೊರಗಿದೆ. 2013ರ ನಂತರ ಮತ್ತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಂದೆ ಪಾಕ್ ಮಂಡಿಯೂರುವ ಸ್ಥಿತಿ ಬಂದೊದಗಿದೆ. ಆದರೆ, ಐಎಂಎಫ್ ದೇಣಿಗೆ ನೀಡುವ ರಾಷ್ಟ್ರಗಳಲ್ಲಿ ಅಮೆರಿಕದ್ದು, ಸಿಂಹಪಾಲು. ಆದರೆ, ಉಗ್ರರ ನಿಗ್ರಹದಲ್ಲಿ ಪಾಕ್ ಕಳ್ಳಾಟ ಆಡುತ್ತಿದೆ ಎಂದು ಮುನಿಸಿಕೊಂಡಿರುವ ಅಮೆರಿಕ, ಈಗೇನಾದರೂ ಆಕ್ಷೇಪ ವ್ಯಕ್ತಪಡಿಸಿದರೆ ಪಾಕ್​ಗೆ ನೆರವು ದೊರೆಯುವ ಸಾಧ್ಯತೆ ಕ್ಷೀಣಿಸುತ್ತದೆ. ಹಣಕಾಸು ಖಾತೆಯನ್ನು ತಮ್ಮ ಬಳಿಯೆ ಇರಿಸಿಕೊಳ್ಳಲು ಇಮ್ರಾನ್ ಬಯಸಿದ್ದಾರೆಂದು ಹೇಳಲಾಗುತ್ತಿದ್ದು, ಇದು ಅವರಿಗೆ ಮುಳ್ಳಿನ ಹಾಸಿಗೆ ಆಗುವ ಸಾಧ್ಯತೆ ಇದೆ.

2 ಉಗ್ರರ ಬಗ್ಗೆ ಮೃದು ಧೋರಣೆ: ಮೂಲಭೂತವಾದಿಗಳನ್ನು ಮಟ್ಟಹಾಕಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಅಂತಾರಾಷ್ಟ್ರೀಯ ಸಮುದಾಯ ವಿಶೇಷವಾಗಿ ಅಮೆರಿಕಕ್ಕೆ ನಂಬಿಕೆ ಬರುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ನಡೆದ ದಾಳಿಯಲ್ಲಿ 200ಕ್ಕೂ ಹೆಚ್ಚು ಜನರು ಪಾಕ್​ನಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ನೂತನ ಪ್ರಧಾನಿಗೆ ‘ತಾಲಿಬಾನ್ ಖಾನ್’ ಎಂಬ ಉಪಾಧಿಯೂ ಇರುವುದರಿಂದ ಉಗ್ರರ ಸಂಘಟನೆಗಳ ಜತೆಗೆ ಮಾತುಕತೆ ನಡೆಸಿ ಉಗ್ರವಾದವನ್ನು ದೇಶದಿಂದ ದೂರ ಮಾಡಿಯಾರೆ ಎಂಬ ಅನುಮಾನ ಇದೆ. ಮೃದು ಧೋರಣೆ ಹೊಂದಿರುವ ಖಾನ್​ರ ದೌರ್ಬಲ್ಯ ಬಳಸಿಕೊಂಡು ಉಗ್ರರು ಮತ್ತಷ್ಟು ಪ್ರಬಲರಾಗುವ ಅಪಾಯವೂ ಇದೆ. ಜಾಗತಿಕವಾಗಿ ನೀಡುವ ಹಣಕಾಸು ನೆರವು ಉದ್ದೇಶಕ್ಕೆ ಬಳಕೆಯಾಗುತ್ತಿದೆಯೆ ಎಂದು ನಿಗಾ ಇರಿಸುವ ಪ್ಯಾರಿಸ್ ಮೂಲದ ಹಣಕಾಸು ಕ್ರಿಯಾ ಪಡೆ (ಎಫ್​ಎಟಿಎಫ್) ಪಾಕಿಸ್ತಾನವನ್ನು ಕಳೆದ ಜೂನ್​ನಲ್ಲಿ ಬೂದುಪಟ್ಟಿಗೆ (ಗ್ರೇಲಿಸ್ಟ್) ಸೇರಿಸಿದೆ. ಉಗ್ರರಿಗೆ ಹಣಕಾಸು ದೊರೆಯದಂತೆ ಮತ್ತು ಅಕ್ರಮ ಹಣಕಾಸು ವ್ಯವಹಾರ ತಡೆಗಟ್ಟುವ ಕಾನೂನು ಬಿಗಿ ಮಾಡಿ ಎಂದು ಸೂಚಿಸಿರುವ ಎಫ್​ಎಟಿಎಫ್, 10 ಅಂಶಗಳ ಕ್ರಿಯಾಯೋಜನೆ ಯನ್ನು ಕೊಟ್ಟಿದೆ. ಇದನ್ನು ಸೆಪ್ಟೆಂಬರ್ ಒಳಗೆ ಜಾರಿಗೆ ತರದಿದ್ದರೆ ನಿರ್ಬಂಧಕ್ಕೆ ಸಿದ್ಧರಾಗಿ ಎಂದು ಖಡಕ್ ಎಚ್ಚರಿಕೆಯನ್ನೂ ನೀಡಿದೆ. ಇನ್ನು 40 ದಿನಗಳಲ್ಲಿ ಈ ಷರತ್ತನ್ನು ಪೂರೈಸುವ ಇಕ್ಕಟ್ಟು ಇಮ್ರಾನ್​ರ ಮೇಲಿದೆ.

ಜಲಕ್ಷಾಮ: ಪಾಕಿಸ್ತಾನದಲ್ಲಿ ಕುಡಿಯುವ ನೀರಿನ ಅಭಾವ ತೀವ್ರ ತರಹದಲ್ಲಿದೆ. ನೀರನ್ನು ಹಿತಮಿತವಾಗಿ ಬಳಸಿ, ಜಲಮೂಲಗಳ ಸಂರಕ್ಷಣೆ ಮಾಡದಿದ್ದರೆ 2025ರ ಹೊತ್ತಿಗೆ ಪರಿಸ್ಥಿತಿ ಬಿಗಾಡಾಯಿಸಲಿದೆ. ಸೊಮಾಲಿಯಾಗಿಂತ ದೈನೇಸಿ ಸ್ಥಿತಿಯನ್ನು ಪಾಕ್ ಎದುರಿಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆ ಪಾಕ್​ಗೆ ಎಚ್ಚರಿಕೆ ನೀಡಿದೆ. ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ಹೊಂದಿರುವ ಇಮ್ರಾನ್, ನೀರಿನ ಸಂರಕ್ಷಣೆ ಮತ್ತು ಜಲ ಜಾಗೃತಿ ಕಾರ್ಯಕ್ರಮ ಗಳನ್ನು ಯದ್ಧೋಪಾದಿಯಲ್ಲಿ ಹಮ್ಮಿಕೊಳ್ಳಬೇಕಿದೆ.

4 ಏರುತ್ತಿರುವ ಜನಸಂಖ್ಯೆ: ಏಷ್ಯಾದಲ್ಲಿ ಅತ್ಯಂತ ಹೆಚ್ಚಿನ ಜನನ ಪ್ರಮಾಣ ಇರುವುದು ಪಾಕಿಸ್ತಾನದಲ್ಲಿ. ದೇಶದ ಜನಸಂಖ್ಯೆ 20.70 ಕೋಟಿ ದಾಟಿದೆ. ಸರಾಸರಿ ಪ್ರತಿ ಮಹಿಳೆಗೆ ಮೂರು ಮಕ್ಕಳು ಇದ್ದಾರೆ. ಜನಸಂಖ್ಯಾ ಸ್ಪೋಟದಿಂದ ಆರ್ಥಿಕ, ಸಾಮಾಜಿಕ ಸಮಸ್ಯೆಗಳು ಉಲ್ಬಣ ಆಗುತ್ತಿದೆ. ಇದರ ನಿಯಂತ್ರಣ ಹಾಕಲು ಪಿಟಿಐ ಸರ್ಕಾರ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳದೆ ಗತ್ಯಂತರವಿಲ್ಲ.

5 ಸೇನೆ-ನಾಗರಿಕರ ಸಂಬಂಧ ಸುಧಾರಣೆ: ಏಳು ದಶಕಗಳಲ್ಲಿ ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತದ ಅವಧಿಯೇ ಹೆಚ್ಚು. ಜನರನ್ನು ಸೇನೆಯ ಭೀತಿಯಿಂದ ಇಮ್ರಾನ್ ಹೊರತರಬೇಕಿದೆ. ಸಂಸತ್​ನಲ್ಲಿ ಅವರೇ ಘೋಷಿಸಿದಂತೆ ‘ನಾನು ಸ್ವಬಲದಿಂದ ಇಲ್ಲಿ ಬಂದು ನಿಂತಿದ್ದೇನೆ’ ಎಂಬುದನ್ನು ಅಕ್ಷರಶಃ ನಡೆಸಿಕೊಡಬೇಕಿದೆ.

ಸಂಬಂಧ ಸುಧಾರಣೆಗೆ ಹಲವು ಅಡ್ಡಿ

ಉಗ್ರರ ಬಗ್ಗೆ ಮೃದು ಧೋರಣೆ ತಳೆದಿರುವ ಇಮ್ರಾನ್ ಖಾನ್ ಈಗ ಪ್ರಧಾನಿ ಆದ ಕಾರಣ ಭಾರತದ ಜತೆಗಿನ ಸಂಬಂಧ ಸುಧಾರಣೆಗೆ ಹಲವು ಅಡ್ಡಿ ಆತಂಕಗಳಿವೆ. ಈಗಾಗಲೇ ನೆಲಕಚ್ಚಿರುವ ದ್ವಿಪಕ್ಷೀಯ ಸಂಬಂಧ ಸುಧಾರಣೆ ಆಗಬೇಕಾದಲ್ಲಿ, ಗಡಿ ಯಲ್ಲಿ ಗುಂಡಿನ ಮೊರೆತ ಕಡಿಮೆ ಆಗಬೇಕು. ಆದರೆ, ಛಾಯಾ ಸಮರ ನಡೆಸುತ್ತಿರುವ ಪಾಕ್ ಸೈನ್ಯದ ಕಪಿಮುಷ್ಟಿಯಲ್ಲಿ ಪಾಕಿಸ್ತಾನದ ಆಡಳಿತದ ಸೂತ್ರ ಇದೆ. ಇಂತಹ ಸನ್ನಿವೇಶದಲ್ಲಿ ಇಮ್ರಾನ್ ಖಾನ್ ಭಾರತದ ಜತೆಗೆ ಸಂಬಂಧ ಸುಧಾರಿಸಿಕೊಂಡು, ಶಾಂತಿ ಸ್ಥಾಪಿಸಬೇಕಿದೆ. ಇದಕ್ಕೆ ಇಮ್ರಾನ್ ಮುಂದಡಿ ಇಟ್ಟರೂ, ಅವರ ಬೆನ್ನಿಗಿರುವ ಸೇನೆ ಇದಕ್ಕೆ ಮುಕ್ತ ಅವಕಾಶ ನೀಡುವುದೆ ಎಂಬುದು ಪ್ರಶ್ನೆ.

ತಪ್ಪು ಉಚ್ಚಾರ

ಪ್ರಮಾಣ ವಚನ ಸ್ವೀಕರಿಸುವಾಗ ಇಮ್ರಾನ್ ಖಾನ್ ಕೆಲವು ಶಬ್ದಗಳನ್ನು ತಡವರಿಸಿ, ಮತ್ತೆ ಕೆಲವನ್ನು ತಪ್ಪಾಗಿ ಉಚ್ಚರಿಸಿದರು. ಪ್ರತಿಜ್ಞಾ ವಿಧಿ ಬೋಧಿಸುವಾಗ ಅಧ್ಯಕ್ಷ ಹುಸೇನ್, ‘ರೋಜ್-ಎ-ಖಿಯಾಮತ್’ (ನ್ಯಾಯನಿರ್ಣಾಯಕ ದಿನ) ಎಂದು ಹೇಳಿದರು. ಇದನ್ನು ತಪ್ಪಾಗಿ ಗ್ರಹಿಸಿದ ಖಾನ್, ‘ರೋಜ್-ಎ-ಖಿಯಯಾದ್ತ್’ (ನಾಯಕತ್ವದ ದಿನ) ಎಂದು ತಪ್ಪಾಗಿ ಹೇಳಿದರು. ಆಗ ಅಧ್ಯಕ್ಷರು ಮತ್ತೊಮ್ಮೆ ಅದೇ ಪದವನ್ನು ಹೇಳಿದರು. ತಪ್ಪಾಗಿದ್ದನ್ನು ಅರಿತ ಖಾನ್ ಮುಗುಳ್ನಕ್ಕು, ಕ್ಷಮೆ ಕೋರಿ, ಸರಿಯಾಗಿ ಉಚ್ಚರಿಸಿದರು.

ಇಮ್ರಾನ್ ಆನಂದಬಾಷ್ಪ

ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಮತ್ತು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಪಾಕ್ ಅಧ್ಯಕ್ಷರ ನಿವಾಸ ‘ಐವನ್-ಎ-ಸದ್›’ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷ ಮಮ್ನೂನ್ ಹುಸೇನ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ನಸುಬೂದು ಮಿಶ್ರಿತ ಕಪು್ಪಬಣ್ಣದ ಶೆರ್ವಾನಿ ಧರಿಸಿದ್ದ 65 ವರ್ಷದ ಇಮ್ರಾನ್, ಪ್ರಮಾಣ ವಚನ ಸ್ವೀಕರಿಸುವಾಗ ಆನಂದಬಾಷ್ಪ ಸುರಿಸಿದರು.

ಭಾರತದಿಂದ ಪಂಜಾಬ್ ಸಚಿವ ಸಿಧು ಭಾಗಿ

ಇಮ್ರಾನ್ ಪ್ರಮಾಣ ವಚನ ಸಮಾರಂಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ, ಪಂಜಾಬ್​ನ ಸಚಿವ ನವಜೋತ್ ಸಿಂಗ್ ಸಿಧು ಮೊದಲ ಸಾಲಿನಲ್ಲೆ ಕುಳಿತಿದ್ದರು. ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ, ಸಿಧು ಅವರನ್ನು ಕಂಡೊಡನೆಯೆ ನಸುನಗುತ್ತ ಅವರ ಬಳಿ ಹೋಗಿ ಆಲಂಗಿಸಿ ಕೆಲ ನಿಮಿಷ ಮಾತನಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಧು, ‘ಪ್ರೀತಿಯ ಸಂದೇಶವನ್ನು ಹೊತ್ತು, ಭಾರತದ ರಾಯಭಾರಿಯಾಗಿ ಇಲ್ಲಿಗೆ ಬಂದಿದ್ದೇನೆ. ಆದರೆ, ರಾಜಕಾರಣಿಯಾಗಿ ಅಲ್ಲ. ಇಮ್ರಾನ್​ರ ಗೆಳೆಯನಾಗಿ ಆಗಮಿಸಿದ್ದೇನೆ. ಖಾನ್ ಸಾಹೇಬರಿಗೆ ಕಾಶ್ಮೀರಿ ಶಾಲನ್ನು ಉಡುಗೊರೆಯಾಗಿ ತಂದಿದ್ದೇನೆ. ಕ್ರೀಡಾಪಟುಗಳು, ಕಲಾವಿದರಿಂದ ಎರಡೂ ದೇಶಗಳ ಜನರನ್ನು ಬೆಸೆಯಲು ಸಾಧ್ಯ’ ಎಂದ ಅವರು ‘ಹಿಂದೂಸ್ತಾನ್ ಜೀವೇ, ಪಾಕಿಸ್ತಾನ್ ಜೀವೇ’ ಎಂಬ ಘೋಷಣೆ ಮಾಡಿದರು.