ಪೂರ್ವ ದೆಹಲಿಯ ಬಿಜೆಪಿ ಅಭ್ಯರ್ಥಿ ಗೌತಮ್​ ಗಂಭೀರ್​ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ನವದೆಹಲಿ: ಇತ್ತೀಚೆಗೆ ಬಿಜೆಪಿಗೆ ಸೇರಿದ್ದ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್​ ಗಂಭೀರ್​ ಅವರು ಪೂರ್ವ ದೆಹಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಗಂಭೀರ್​ ನಿನ್ನೆ ನಾಮಪತ್ರ ಸಲ್ಲಿಸಿದ್ದರು. ಅವರು ತಮ್ಮ ಬಳಿ 147 ಕೋಟಿ ರೂ. ಬೆಲೆಬಾಳುವ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ಅವರು ದೆಹಲಿಯಲ್ಲಿ ಸ್ಪರ್ಧಿಸುತ್ತಿರುವ 349 ಅಭ್ಯರ್ಥಿಗಳಲ್ಲೇ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

2017-18ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್​ನಲ್ಲಿ ವಾರ್ಷಿಕ 12.40 ಕೋಟಿ ರೂ. ಆದಾಯ ಹೊಂದಿರುವುದಾಗಿ ಗಂಭೀರ್​ ಘೋಷಿಸಿಕೊಂಡಿದ್ದಾರೆ. ಅವರ ಪತ್ನಿ ನತಾಶಾ ಗಂಭೀರ್​ ವಾರ್ಷಿಕ 6.15 ಲಕ್ಷ ರೂ. ಆದಾಯ ಹೊಂದಿದ್ದಾರೆ.

ಇನ್ನು ದಕ್ಷಿಣ ದೆಹಲಿಯಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ 2008ರ ಒಲಂಪಿಕ್ಸ್​ ಕಂಚಿನ ಪದಕ ವಿಜೇತ ಬಾಕ್ಸರ್​ ವಿಜೇಂದರ್​ ಸಿಂಗ್​ ಅವರು 12.14 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈಶಾನ್ಯ ದೆಹಲಿ ಲೋಕಸಭೆ ಕ್ಷೇತ್ರದಿಂದ ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್​ ಅವರು ಕಾಂಗ್ರೆಸ್​ ಅಭ್ಯರ್ಥಿಯಾಗಿ ನಿನ್ನೆ ನಾಮಪತ್ರ ಸಲ್ಲಿಸಿದರು. ಅವರು ತಮ್ಮ ಬಳಿ 4.92 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. (ಏಜೆನ್ಸೀಸ್​)