ನಾನಿನ್ನೂ ಸತ್ತಿಲ್ಲ, ಸುರಕ್ಷಿತವಾಗಿದ್ದೇನೆ: ಹೀಗೆಂದು ಸುರೇಶ್​ ರೈನಾ ಹೇಳಿದ್ದೇಕೆ?

ನವದೆಹಲಿ: ನಾನಿನ್ನೂ ಸತ್ತಿಲ್ಲ, ಸುರಕ್ಷಿತವಾಗಿದ್ದೇನೆ ಎಂದು ಟೀಂ ಇಂಡಿಯಾದ ಬ್ಯಾಟ್ಸ್​ಮನ್​ ಸುರೇಶ್​ ರೈನಾ ಟ್ವಿಟರ್​ ಮೂಲಕ ದೇಶದ ಜನತೆಗೆ ಸ್ಪಷ್ಟಪಡಿಸಿದ್ದಾರೆ.

ಹೌದು 32 ವರ್ಷದ ಸುರೇಶ್​ ರೈನಾ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂಬ ಸುದ್ದಿಗಳು ಕೆಲವು ದಿನಗಳಿಂದ ಯೂಟ್ಯೂಬ್​, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಜತೆಗೆ ಕೆಲವೊಂದು ಯೂಟ್ಯೂಬ್​ ಚಾನಲ್​ಗಳಲ್ಲಿ ಅವರು ಗಾಯಗೊಂಡಿದ್ದಾರೆ ಎಂದು ತೋರಿಸುವ ಫೇಕ್​ ವಿಡಿಯೋಗಳನ್ನು ಅಪ್​ಲೋಡ್​ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಸುರೇಶ್​ ರೈನಾ ಸೋಮವಾರ ಟ್ವೀಟ್​ ಮಾಡಿದ್ದು ‘ಕೆಲವು ದಿನಗಳಿಂದ ನಾನು ಕಾರು ಅಪಘಾತದಲ್ಲಿ ಗಾಯಗೊಂಡಿದ್ದೇನೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದರಿಂದ ನನ್ನ ಕುಟುಂಬಸ್ಥರು ಮತ್ತು ಸ್ನೇಹಿತರು ಮಾನಸಿಕವಾಗಿ ಘಾಸಿಕೊಂಡಿದ್ದಾರೆ. ಈ ಸುಳ್ಳು ಸುದ್ದಿಗಳನ್ನು ನಂಬಬೇಡಿ. ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿದ್ದೇನೆ. ಸುಳ್ಳು ಸುದ್ದಿ ಅಪ್​ಲೋಡ್​ ಮಾಡಿದ ಯೂಟ್ಯೂಬ್​ ಚಾನಲ್​ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)